ನಾವು ಪ್ರಾಮಾಣಿಕವಾಗಿ ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು: ದೇವರು ನಮಗೆ ಪ್ರತೀ ದಿನ, ಪ್ರತೀ ಕ್ಷಣ ಬೇಕೇ ಬೇಕು ಎಂದು ನಿಶ್ಚಿತವಾಗಿ ನಮಗೆ ಅನಿಸುತ್ತದೆಯೇ…? ಇದಕ್ಕುತ್ತರಿಸುವುದು ಬಲು ಕಷ್ಟ! ಪಂಚೇಂದ್ರಿಯಗಳ ಮೂಲಕ ಪಡೆಯುವ ಸುಖವೇ ನಿಜವಾದ ಸುಖವೆಂಬ ಭ್ರಮೆಯಲ್ಲಿ ನಾವು ಬದುಕುವುದರಿಂದ ದೇವರ ಅಗತ್ಯ ನಮಗೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ನಮ್ಮ ದೇಹವು ಬಯಸುವ ಸುಖ- ಸೌಕರ್ಯವನ್ನು ಒದಗಿಸಲು ನಾವು ಸಮರ್ಥರಿದ್ದೇವೆ ಎಂಬ ಭಾವನೆಯಲ್ಲೇ ನಾವು ಬದುಕುವುದರಿಂದ ನಮ್ಮ ಕೈಲಾಗದ ಪರಿಸ್ಥಿತಿ ಎದುರಾದಾಗ ಮಾತ್ರ ದೇವರನ್ನು ನೆನೆಯುತ್ತೇವೆ. ಒಂದೊಮ್ಮೆ ನಮ್ಮ ಕಷ್ಟಗಳನ್ನು ಪರಿಹರಿಸಲು ಬಂಧುಗಳು, ಸ್ನೇಹಿತರು ನೆರವಾದರೆ ಆಗಲೂ ದೇವರನ್ನು ನೆನೆಯಲಾರೆವು. ಯಾವುದೇ ಮೂಲದಿಂದ ನೆರವು ಬರುವ ಸಾಧ್ಯತೆಯೇ ಇಲ್ಲವೆಂದು ಮನವರಿಕೆಯಾದಾಗ ಕೊನೆಗೆ ‘ದೇವರೇ ಗತಿ’ ಎಂದು ಆ ದೇವರನ್ನು ನೆನೆಯುವೆವು ಮನುಷ್ಯ ಮೂಲತಃ ಸ್ವಾರ್ಥಿಯಾಗಿರುವುದರಿಂದ ಆತ ಬಹಳ ಲೆಕ್ಕಾಚಾರಿ; ಅಂತೆಯೇ ಸಂಬಂಧಗಳು ‘ಅಗತ್ಯಾಧಾರಿತವಾಗಿವೆ. ಅಗತ್ಯ ಇಲ್ಲವೆಂದಾದರೆ ಆತ ಸೇರಿಸಿಕೊಳ್ಳಲಾರ. ತನ್ನಿಂದ ಯಾರೂ ಪ್ರಯೋಜನವನ್ನು ಪಡೆಯುವುದು ಅವನಿಗೆ ಇಷ್ಟವಿಲ್ಲದ ವಿಷಯ. ಇದು ಯಾಕೆ ಹೀಗೆ ಎಂದರೆ ತಾನು ಶಾಶ್ವತ ಎಂಬ ಭಾವನೆ ಆತನಲ್ಲಿ ಅಷ್ಟು ಗಟ್ಟಿಯಾಗಿರುವುದೇ ಆಗಿದೆ. ವಿಪತ್ಯಾಸವೆಂದರೆ ಈ ಭ್ರಾಮಕ ಸೌಧ ‘ಮರಣ ಭಯ’ದ ನೆಲೆಗಟ್ಟಿನ ಮೇಲೆಯೇ ನಿಂತಿದೆ! ಒಂದಲ್ಲ ಒಂದು ದಿನ ತಾನು ತನ್ನ ಹೆಂಡತಿ, ಮಕ್ಕಳು, ಬಂಧುಬಳಗ, ಆಸ್ತಿಪಾಸ್ತಿ, ಅಂತಸ್ತು, ಕೀರ್ತಿ ಇತ್ಯಾದಿಗಳೆಲ್ಲವನ್ನೂ ಬಿಟ್ಟು ಕಾಲನಕರೆಗೆ ಓಗೊಡಲೇಬೇಕು ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಅವನು ಯಾವತ್ತೂ ಸಿದ್ಧನಿರುವುದಿಲ್ಲ. ಆದುದರಿಂದ ದೇಹಪ್ರಜ್ಞೆಯಿಂದ ಪಾರಾಗದೆ ಆಧ್ಯಾತ್ಮಿಕ ಪ್ರವೃತ್ತಿಯನ್ನು ನಾವು ರೂಢಿಸಿಕೊಳ್ಳಲಾರೆವು. ಇಂದಲ್ಲ ನಾಳೆ ಬಿದ್ದು ಹೋಗುವ ಈ ಶರೀರದಿಂದ ಸಿಗುವ ಯಾವತ್ತೂ ಸುಖ ನಿಜದ ಸುಖವೂ ಅಲ್ಲ, ಶಾಶ್ವತ ಆನಂದವೂ ಅಲ್ಲ ಎಂಬ ಸತ್ಯವನ್ನು ಅರಿತುಕೊಂಡರೆ ಮಾತ್ರ ದೇಹಪ್ರಜ್ಞೆಯಿಂದ ಮುಕ್ತರಾಗಲು ಸಾಧ್ಯ!