ಬದುಕನ್ನು ನಾವೆಲ್ಲರೂ ತುಂಬ ಪ್ರೀತಿಸುತ್ತೇವೆ. ಏಕೆಂದರೆ ಹೆಚ್ಚು ಕಾಲ ಬಾಳಿ ಬದುಕಬೇಕು ಎಂಬ ಆಸೆಯಲ್ಲಿ, ಆ ಆಸೆಯಲ್ಲಿ ಐಹಿಕ ಬದುಕಿನ ಸುಖಭೋಗಗಳನ್ನು ಅತ್ಯಧಿಕವಾಗಿ ಅನುಭವಿಸಬೇಕೆಂಬ ಕಾಮನೆ ಇದೆ. ಆದುದರಿಂದಲೇ ಬದುಕಿನ ಮೇಲೆ ನಮಗಿರುವ ಪ್ರೀತಿ ನಿಷ್ಕಳಂಕ ಪ್ರೀತಿ ಅಲ್ಲ, ತಣಿಯದ ಕಾಮನೆಗಳಿಂದ ಕಳಂಕಿತವಾಗಿರುವ ನಮ್ಮ ಬದುಕು ಈ ಕಾರಣದಿಂದಾಗಿಯೇ ಅಶಾಂತಿ, ದುಃಖ ಹಾಗೂ ಕೊರಗಿನಿಂದ ತುಂಬಿಕೊAಡಿದೆ. ಐಹಿಕ ಸುಖವನ್ನು ಭೋಗಿಸಲೆಂದೇ ಬದುಕನ್ನು ಪ್ರೀತಿಸುವವರು ದೇಹವೇ ಪರಮೋನ್ನತವಾದುದೆಂದು ಭ್ರಮಿಸಿ ಅದನ್ನು ಆರಾಧಿಸುವುದು ಸಹಜ. ದೇಹವು ನಶ್ವರವೆಂದು ತಿಳಿದಿದ್ದರೂ ಅದು ಶಾಶ್ವತವೆಂಬ ಭ್ರಮೆಯಲ್ಲಿ ಬದುಕುವುದು ಅವರಿಗೆ ಅನಿವಾರ್ಯ. ಈ ಭ್ರಮೆಯನ್ನು ಬಯಲುಗೊಳಿಸುವ ವಾಸ್ತವವೆಂದರೆ ಸಾವು. ಸಾವೆನ್ನುವುದು ಎಲ್ಲರ ಬದುಕಿನ ಪರಮ ಸತ್ಯ. ಬದುಕಿನಲ್ಲಿ ನಾವು ಎರಡು ಸಂಗತಿಗಳಿಗೆ ಸವಾಲು ಹಾಕಲಾರೆವು. ಮೊದಲನೆಯದು ಸತ್ಯ; ಎರಡನೆಯದು ‘ಮೂರ್ಖರು! ಮೂರ್ಖರನ್ನು ಚ್ಯಾಲೆಂಜ್ ಮಾಡಬೇಕಾದರೆ ನಾವೂ ಅವರಂತೆ ಮೂರ್ಖರಾಗಿರಬೇಕು. ಸಾವೆಂಬ ಪರಮ ಸತ್ಯವನ್ನು ಮರೆತು ಬದುಕುವುದು ಕೂಡ ಅಜ್ಞಾನದ ಫಲವೇ ಆಗಿದೆ. ಈ ಅಜ್ಞಾನದಲ್ಲಿ ಬದುಕಿನ ಬಗ್ಗೆ ಅತಿಯಾದ ಮೋಹವನ್ನು ತಳೆದಾಗ ನಿತ್ಯವೂ ಸಾವಿನ ಭಯದಲ್ಲೇ ಬದುಕುವುದು ಅನಿವಾರ್ಯವಾಗುತ್ತದೆ. ಆದುದರಿಂದಲೇ ಸಾವಿನ ಭಯ ನಮ್ಮಲ್ಲಿ ಸದಾ ಅಂತರ್ಗತವಾಗಿದೆ. ನಶ್ವರವಾದ ದೇಹವನ್ನೂ ಕ್ಷಣಭಂಗುರವಾದ ಐಹಿಕ ಸುಖಭೋಗಗಳನ್ನೂ ಶಾಶ್ವತವೆಂಬಂತೆ ನಾವು ಪ್ರೀತಿಸುವುದು ಕೂಡ ಸಾವಿನ ಭಯದಿಂದಲೇ. ಒಂದೆಡೆ ಬದುಕಿನ ಬಗ್ಗೆ ಅಪಾರವಾದ ವ್ಯಾಮೋಹ, ಇನ್ನೊಂದೆಡೆ ಸಾವಿನ ಭಯ – ಈ ಎರಡು ಅತಿಗಳ ನಡುವಿನ ಹಲವು ವೈರುಧ್ಯಗಳೊಡನೆ ಅಸಹಜವಾಗಿ ಬದುಕುತ್ತಾ ಮನಸ್ಸಿನ ಶಾಂತಿ ಹಾಗೂ ಸಮತೆಯನ್ನು ನಾವು ಕಳೆದುಕೊಳ್ಳುತ್ತೇವೆ. ಇದನ್ನು ತಪ್ಪಿಸಲು ನಿತ್ಯವೂ ದೇವರ ಧ್ಯಾನದಿಂದ ಮನಸ್ಸನ್ನು ಏಕಾಗ್ರ ಗೊಳಿಸಿದಾಗ ‘ನಾನೆಂದರೆ ದೇಹವಲ್ಲ’ ಎಂಬ ಸತ್ಯದ ಅನ್ವೇಷಣೆ ಸಾಧ್ಯವಾಗುತ್ತದೆ.