Home » ಸ್ನೇಹ ಸೇತು
 

ಸ್ನೇಹ ಸೇತು

by Kundapur Xpress
Spread the love

ಜೀವಾತ್ಮನೇ ನಮ್ಮ ಪರಮ ಮಿತ್ರನೆಂದು ನಾವು ಅರಿಯುವುದು ಅಷ್ಟು ಸುಲಭವಲ್ಲ. ಮಿತ್ರನನ್ನು ಮತ್ತು ವೈರಿಯನ್ನು ಯಥಾರ್ಥವಾಗಿ ಗುರುತಿಸಬೇಕಾದರೆ ನಮ್ಮ ಅಂತಃಚಕ್ಷುಗಳು ಕೆಲಸ ಮಾಡಬೇಕು. ಹೊರಗಣ್ಣಿನಿಂದ ನಾವು ಕಾಣುವ ನೋಟಗಳು ಮಾಯೆಯ ಪ್ರಭಾವದಿಂದಾಗಿ ನಮಗೆ ಯಥಾರ್ಥ ಜ್ಞಾನವನ್ನು ಕೊಡಲಾರವು. ಹಾಗೆಯೇ ಐಹಿಕ ಬದುಕಿನಲ್ಲಿ ನಮ್ಮ ಸಂಪರ್ಕಕ್ಕೆ ಬರುವವರನ್ನು ನಾವು ನಮ್ಮ ಮಿತ್ರರೋ ಶತ್ರುಗಳೋ ಎಂದು ಹೊರ ನೋಟದಿಂದಲೇ ಗುರುತಿಸಲಾರೆವು. ಆರೋಗ್ಯ ದಿಂದಿರುವಾಗ ನಾವು ನಾಲಗೆಯ ರುಚಿಯನ್ನು ಇನ್ನಷ್ಟು ತೀಕ್ಷ್ಯಗೊಳಿಸುವ ಬಗೆ ಬಗೆಯ ಖಾದ್ಯಗಳನ್ನು ಸವಿಯುವುದರಲ್ಲೇ ಆಸಕ್ತರಾಗಿರುತ್ತೇವೆ. ಅಂತಹ ಖಾದ್ಯಗಳು ನಮ್ಮ ದೇಹದ ಆರೋಗ್ಯವನ್ನು ಎಷ್ಟರ ಮಟ್ಟಿಗೆ ಹಾಳುಗೆಡಹುತ್ತವೆ ಎಂಬುದರ ವಿವೇಚನೆಯೇ ನಮಗೆ ಇರುವುದಿಲ್ಲ. ಅತಿಯಾದ ಸಿಹಿ, ಖಾರ, ಮಸಾಲೆಗಳಿಂದ ಒಡಗೂಡಿದ ಆಹಾರ ನಾಲಗೆಗೆ ರುಚಿ ಎಂದು ಚಪ್ಪರಿಸಿ ತಿನ್ನುತ್ತೇವೆ. ಆದರೆ ಆ ರುಚಿಕರವಾದ ಖಾದ್ಯಗಳಿಂದ ಹೊಟ್ಟೆಯು ಕೆಟ್ಟು ಆರೋಗ್ಯವು ಕೈಕೊಟ್ಟಾಗ ನಾವು ಅನಿವಾರ್ಯವಾಗಿ ಕಹಿ ಔಷಧಗಳನ್ನು ಸೇವಿಸುತ್ತೇವೆ. ಆರೋಗ್ಯದಿಂದಿರುವಾಗ ರುಚಿಕರವಾದ ಖಾದ್ಯಗಳನ್ನು ನಾವು ನಮ್ಮ ಪರಮ ಮಿತ್ರನೆಂಬಂತೆ ಪ್ರೀತಿಸುತ್ತೇವೆ. ಆದರೆ ಅನಾರೋಗ್ಯ ಉಂಟಾದಾಗ ಆ ಪರಮ ಮಿತ್ರನನ್ನು ವರ್ಜಿಸುತ್ತೇವೆ. ಆ ಸಂದರ್ಭದಲ್ಲಿ ಕಹಿಯಾದ ಮದ್ದು ನಮಗೆ ಇಷ್ಟವಾಗದಿದ್ದರೂ ಅದು ನಮಗೆ ಪರಮ ಮಿತ್ರನಿಗಿಂತಲೂ ಮಿಗಿಲಾಗಿ ಬೇಕೆನಿಸುತ್ತದೆ. ಜೀವಾತ್ಮನೆಂಬ ನಮ್ಮ ನಿಜವಾದ ಮಿತ್ರನೊಡನೆ ನಾವು ಸ್ನೇಹವನ್ನು ಬೆಳೆಸಬೇಕಾದರೆ ಬಾಹ್ಯ ಜಗತ್ತಿನ ಆಕರ್ಷಣೆಗಳಿಂದ ನಾವು ಮೊದಲು ಮುಕ್ತರಾಗಬೇಕು. ಆ ಆಕರ್ಷಣೆಗಳು ನಮಗೆ ಎಷ್ಟೇ ಪ್ರಿಯವಾದರೂ ಅವು ನಮ್ಮನ್ನು ಅಧೋಗತಿಗೆ ತಳ್ಳುತ್ತವೆ. ಬಾಹ್ಯ ಆಕರ್ಷಣೆಗಳಿಂದ ಮುಕ್ತರಾಗಲು ಇಂದ್ರಿಯಗಳನ್ನು ನಿಗ್ರಹಿಸಬೇಕು. ಆತ್ಮೋನ್ನತಿಯನ್ನು ಸಾಧಿಸಲು ಜೀವಾತ್ಮನೊಡನೆ ಸ್ನೇಹ- ಸಂಪರ್ಕವನ್ನು ಹೊಂದಬೇಕು. ಆಧ್ಯಾತ್ಮಿಕವಾಗಿ ಅಂತರ್ ಮುಖಿಗಳಾಗಬೇಕು

   

Related Articles

error: Content is protected !!