ದೂರದಲ್ಲಿದ್ದುಕೊಂಡೇ ಸಂಪರ್ಕವನ್ನು ಹೊಂದುವ ವಿನೂತನ ‘ದೂರ ಸಂಪರ್ಕ ಕ್ರಾಂತಿಯ ಯುಗದಲ್ಲಿ ನಾವಿಂದು ಬದುಕುತ್ತಿದ್ದೇವೆ. ಮನುಷ್ಯರ ನಡುವೆ ಸಂಪರ್ಕ ಸಂವಹನವನ್ನು ಬೆಳೆಸುವ ಈ ಕ್ರಾಂತಿಯನ್ನೇನೋ ನಾವು ಯಶಸ್ವಿಯಾಗಿ ಸಾಧಿಸಿದ್ದೇವೆ. ಆದರೆ ದೇವರೊಡನೆ ದೂರಸಂಪರ್ಕವನ್ನು ಹೊಂದಲು ನಾವಿನ್ನೂ ಸಫಲರಾಗಿಲ್ಲ ನಾವು ದೇವರಿಂದ ಬಹಳ ದೂರದಲ್ಲಿದ್ದೇವೆಂದು ಭಾವಿಸಿರುವುದೇ ಇದಕ್ಕೆ ಕಾರಣ. ಕಣ್ಣಿಗೆ ಕಾಣಲು ಸಿಗದ ದೇವರು ನಿಜಕ್ಕೂ ನಮ್ಮಿಂದ ಅಷ್ಟು ದೂರದಲ್ಲಿದ್ದಾನೆಯೇ? ದೇವರ ಬಗ್ಗೆ ನಾವು ಹೇಗೆ ಭಾವಿಸುವೆವೋ ಹಾಗೆ. ದೂರವೆಂದು ಭಾವಿಸಿದರೆ ದೂರ; ಹತ್ತಿರವೆಂದು ಕಂಡುಕೊಂಡರೆ ಹತ್ತಿರ. ಇದಕ್ಕೆ ಭಕ್ತ ಪ್ರಹ್ಲಾದನೇ ನಮಗೊಂದು ನಿದರ್ಶನ. ದೇವರನ್ನು ನಾವು ಹೊರಗೆಲ್ಲೂ ಕಾಣಬೇಕಿಲ್ಲ, ನಮ್ಮೊಳಗೇ ಅವನಿದ್ದಾನೆ. ನಾವು ಇಷ್ಟಪಟ್ಟಾಗಲೆಲ್ಲ ನಮ್ಮ ಮನಸ್ಸಿನಂಗಳಕ್ಕೆ ಬಂದು ನಮ್ಮೊಡನೆ ಮಾತನಾಡುತ್ತಾನೆ. ಕಷ್ಟಸುಖಗಳನ್ನು ತಿಳಿದುಕೊಳ್ಳುತ್ತಾನೆ. ಭವಬಂಧನದಿಂದ ನಮ್ಮನ್ನು ಪಾರುಮಾಡಲು ಆತನು ಬಯಸುತ್ತಾನೆ. ಆದರೂ ನಾವು ಅವನೊಡನೆ ಸಂಪರ್ಕವನ್ನು ಹೊಂದಲು ಬಯಸುವುದಿಲ್ಲ. ಕಾರಣ ಹೊರ ಜಗತ್ತಿಗೆ ಅಷ್ಟೊಂದು ಗಟ್ಟಿಯಾಗಿ ನಮ್ಮನ್ನು ಬಂಧಿಸಿಕೊಂಡಿದ್ದೇವೆ. ಆದುದರಿಂದಲೇ ನಮಗೆ ನಮ್ಮೊಳಗಿನ ದೇವರು ತುಂಬ ದೂರವೆನಿಸಿದ್ದಾನೆ. ಧ್ಯಾನದ ಮೂಲಕ ದೇವರೊಡನೆ ನಾವು ಸುಲಭದಲ್ಲಿ ಹೇಗೆ ದೂರ ಸಂಪರ್ಕವನ್ನು ಸಾಧಿಸಬಹುದೆಂಬುದನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಉಪಮೆಯ ಮೂಲಕ ಹೀಗೆ ಹೇಳಲಾಗಿದೆ: ಮೀನು ಕೇವಲ ತನ್ನ ದೃಷ್ಟಿಯಿಂಲೇ ತನ್ನ ಮರಿಗಳ ಮೇಲೆ ಮಮತೆಯನ್ನು ಹೊರ ಸೂಸುತ್ತದೆ. ಆಮೆ ನೆಲದಲ್ಲಿ ತನ್ನ ಮೊಟ್ಟೆಗಳನ್ನಿಟ್ಟು ಬಳಿಕ ತಾನು ನೀರಿನೊಳಗೆ ಸೇರಿ ಕಣ್ಣುಮುಚ್ಚಿ ಕೊಂಡು ತನ್ನ ಮರಿಗಳು ಮೊಟ್ಟೆಯೊಡೆದು ಕುಶಲದಿಂದ ಜನುಮಿಸುವುದನ್ನು ಧ್ಯಾನಿಸುತ್ತದೆ. ಪಕ್ಷಿಗಳು ಕೇವಲ ಸ್ಪರ್ಶ ಮಾತ್ರದಿಂದ ಮರಿಗಳನ್ನು ಸಲಹುತ್ತವೆ. ಹಾಗೆಯೇ ದೇವರಿಂದ ನಾವು ಎಷ್ಟೇ ದೂರವಿದ್ದರೂ ಧ್ಯಾನದ ಮೂಲಕ ಆತನ ಬಳಿ ಸಾಗಬಹುದು. ಬಾಹ್ಯ ಜಗತ್ತಿನ ಆಕರ್ಷಣೆಯಿಂದ ಮುಕ್ತರಾಗಿ ದೇವರೊಡನೆ ಸಂಪರ್ಕ ಬೆಳೆಸಲು ಧ್ಯಾನದಷ್ಟು ಸುಲಭ ಮಾರ್ಗ ಬೇರೊಂದಿಲ್ಲ!