- ಸಮಸ್ಯೆಯ ಮೂಲ
ದೇಹದ ಮೂಲಕವೇ ನಮ್ಮನ್ನು ನಾವು ಗುರುತಿಸಿಕೊಳ್ಳುವುದಲ್ಲಿ ಬದುಕಿನ ಎಲ್ಲ ಸಮಸ್ಯೆಗಳ ಮೂಲ ಅಡಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ. ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೊಲ್ಲದೆ ಕ್ಷತ್ರಿಯ ಧರ್ಮವನ್ನು ನಿಭಾಯಿಸುವ ದ್ವಂದ್ವಕ್ಕೆ ಗುರಿಯಾದ ಅರ್ಜುನನ ಮೂಲ ಸಮಸ್ಯೆಯೂ ಅದೇ ಆಗಿತ್ತು. ಕುರುಕ್ಷೇತ್ರದಲ್ಲಿ ತನಗೆ ಮುಖಾಮುಖಿಯಾದ ಕೌರವನ ಸೈನ್ಯದಲ್ಲಿ ಅರ್ಜುನನು ಕಂಡದ್ದು ಯಾರನ್ನು? ತನ್ನ ಗುರುಗಳನ್ನು, ಹಿರಿಯರನ್ನು, ಆಪ್ತೇಷ್ಟರನ್ನು, ಬಂಧು-ಮಿತ್ರರನ್ನಲ್ಲವೇ? ಆದರೆ ಅವರೆಲ್ಲರೂ ತಮ್ಮ ಕ್ಷತ್ರಿಯ ಧರ್ಮಪರಿಪಾಲನೆಗಾಗಿ ಯೋಧರ ರೂಪದಲ್ಲಿ ಅರ್ಜುನನ ಎದುರು ಪಾಳಯದಲ್ಲಿ ಕಾಣಿಸಿಕೊಂಡವರೇ ವಿನಾ ಅರ್ಜುನನು ತಿಳಿದುಕೊಂಡಂತೆ ಗುರು-ಹಿರಿಯರಾಗಿ, ಬಂಧು-ಮಿತ್ರರಾಗಿ, ಆಪ್ತೇಷ್ಟರಾಗಿ ಅಲ್ಲ! ಆದರೆ ಅರ್ಜುನನಿಗೆ ಯುದ್ಧರಂಗದಲ್ಲಿ ಬಂದು ನಿಂತ ಅವರ್ಯಾರು ಶತ್ರುಗಳಾಗಿ ಕಾಣಿಸಿಕೊಳ್ಳಲೇ ಇಲ್ಲ. ಅವರೆಲ್ಲರೂ ತನ್ನ ಪ್ರೀತಿಪಾತ್ರರಾಗಿ, ಸ್ವಜನರಾಗಿಯೇ ಕಾಣಿಸಿಕೊಂಡರು! ಯುದ್ಧ ಮಾಡಲೆಂದು ರಣರಂಗಕ್ಕೆ ಬಂದ ತ್ರಿಲೋಕ ವೀರ ಅರ್ಜುನನಲ್ಲಿ ಇದ್ದಕ್ಕಿದ್ದಂತೆಯೇ ವಿಷಾದ ಯೋಗ ಮೂಡಲು ಕಾರಣವಾದ ಸಂಗತಿ ಏನು ಎಂಬುದನ್ನು ಕೃಷ್ಣ ಕ್ಷಣಾರ್ಧದಲ್ಲೇ ಪತ್ತೆ ಹಚ್ಚಿಬಿಡುತ್ತಾನೆ. ಯುದ್ಧದಲ್ಲಿ ಸ್ವಜನ ಸಮೂಹವನ್ನು ಕೊಂದು ನಾನು ಶ್ರೇಯಸ್ಸನ್ನು ಹೇಗೆ ನಿರೀಕ್ಷಿಸಲಿ ಎಂದು ಅರ್ಜುನನು ಕೃಷ್ಣನಲ್ಲಿ ಪ್ರಶ್ನಿಸುತ್ತಾನೆ. ದೇಹವೇ ನಾವು ಎಂಬ ಭ್ರಾಮಕ ಕಲ್ಪನೆಗೆ ಒಳಗಾದವರಿಗೆ ಬದುಕಿನಲ್ಲಿ ಎದುರಾಗುವ ಸಂದಿಗ್ಧ ಅಪಾರ. ಕೃಷ್ಣ ಹೇಳುತ್ತಾನೆ: ದೇಹ ಸಂಬಂಧವಾದ ಹುಟ್ಟು – ಸಾವಿನ ಮರ್ಮವನ್ನು ತಿಳಿದ ಜ್ಞಾನಿಗಳು ಸತ್ತವರ ಬಗ್ಗೆಯಾಗಲೀ, ಬದುಕಿರುವವರ ಬಗ್ಗೆಯಾಗಲೀ ಎಂದು ಶೋಕಪಡುವುದಿಲ್ಲ!