- ನೆನೆದವರ ಮನದಲ್ಲಿ
ಆತ್ಮಜ್ಞಾನ ಎಂದರೇನು? ಬಹಳ ಜಟಿಲವಾದ ಪ್ರಶ್ನೆ ಇದು. ಸರಳವಾದ ಉತ್ತರವನ್ನು ಪಡೆಯಲು ಸಾಧ್ಯವಿಲ್ಲವೇ? ದೇವನು ಇರುವ ಮೂಲ ಸ್ಥಾನ ಯಾವುದು? ನೆನೆದವರ ಮನದಲ್ಲಿ! ಭಕ್ತಿಯಿಂದ ಆತನನ್ನು ನೆನೆಯುವವರ ಹೃದಯ ಕಮಲದಲ್ಲೇ ಆತ ಕಾಣಿಸಿಕೊಳ್ಳುತ್ತಾನೆ. ನಿಜಕ್ಕಾದರೆ ಪ್ರತಿಯೋರ್ವ ಜೀವಿಯ ಹೃದಯದಲ್ಲೂ ನೆಲೆಸಿರುವುದು ಪರಮಾತ್ಮನ ಅಂಶವೇ ಅಲ್ಲದೇ ಇನ್ನೇನು? ಆದರೂ ನಾವು ಆತನನ್ನು ಕಾಣಲಾರೆವು! ಆತನನ್ನು ಕಾಣುವ ಅಂತಃಚಕ್ಷುಗಳು ಬೇಕು. ಎಂದರೆ ಜೀವಾತ್ಮನ ರೂಪದಲ್ಲೇ ನಮ್ಮೆಲ್ಲರ ಹೃದಯ ದೇಗುಲದಲ್ಲಿ ನೆಲೆಸಿರುವ ಆ ಪರಮಾತ್ಮನ ಸನ್ನಿಧಿಯನ್ನು ಕಾಣುವ ಒಳಗಣ್ಣುಗಳು ನಮಗೆ ಬೇಕು. ದುರಾದೃಷ್ಟಕ್ಕೆ ನಾವು ಆ ಒಳಗಣ್ಣುಗಳನ್ನು ಸದಾ ಮುಚ್ಚಿಕೊಂಡಿರುತ್ತವೆ. ಹಾಗಾಗಿಯೇ ಹೊರಗಣ್ಣುಗಳನ್ನು ನಾವು ಸದಾ ತೆರೆದುಕೊಂಡಿರುತ್ತೇವೆ. ಹೊರಗಣ್ಣುಗಳಿಂದ ಏನನ್ನೆಲ್ಲ ಕಾಣುತ್ತೇವೋ ಅವೆಲ್ಲವೂ ನಿಜವೆಂಬ ಭ್ರಮೆಯನ್ನು ಬೆಳೆಸಿಕೊಳ್ಳುತ್ತೇವೆ. ಹಾಗೆ ನಿಜವೆಂದು ಭ್ರಮಿಸಿದ್ದೆಲ್ಲವೂ ಶಾಶ್ವತವೆಂಬ ಅಭಿಪ್ರಾಯಕ್ಕೂ ಬರುತ್ತೇವೆ. ಹೊರಗಿನ ಕಣ್ಣನ್ನು ಸ್ವಲ್ಪಕಾಲ ಮುಚ್ಚಿ ಧ್ಯಾನಸ್ಥರಾಗಿ ಒಳಗಣ್ಣಿನ ಮೂಲಕ ಹೃದಯ ದೇಗುಲವನ್ನು ತಲುಪಲು ನಮಗೇಕೆ ಸಾಧ್ಯವಾಗದು? ಒಂದೊಮ್ಮೆ ಅದು ಸಾಧ್ಯವಾಗುತ್ತಿದ್ದರೆ ನಮ್ಮೊಳಗಿನ ದೇವನನ್ನು ಕಾಣಲು ನಮಗೆ ಕಷ್ಟವಾಗುತ್ತಿರಲಿಲ್ಲ. ಇಷ್ಟಕ್ಕೂ ಪಂಚೇಂದ್ರಿಯಗಳ ನಿರ್ದೇಶಕನು ಯಾರು? ಅವನೇ ಹೃಷೀಕೇಶ! ಇಂದ್ರಿಯಗಳ ನಿರ್ದೇಶಕನೆಂದು ಕರೆಯಲ್ಪಡುವ ಹೃಷಿಕೇಶನೆಂಬ ಆ ಕೃಷ್ಣ ನಿಜಕ್ಕೂ ನೆಲೆಗೊಂಡಿರುವುದು ನೆನೆದವರ ಮನದಲ್ಲೇ. ನಿಮ್ಮ ಇಂದ್ರಿಯಗಳೆಂಬ ಕುದುರೆಗಳು ಸರಿಯಾದ ಮಾರ್ಗದಲ್ಲಿ ಸಾಗಲು ನಮಗೆ ಬೇಕಿರುವುದು ಕೃಷ್ಣ ಸಾರಥ್ಯವಲ್ಲದೇ ಬೇರೇನು?