53. ಬದುಕಿನ ದೊಡ್ಡ ಸಾಧನೆ
ನಮ್ಮನ್ನು ನಾವು ಅರಿಯುವುದನ್ನು ಬದುಕಿನ ಅತ್ಯಂತ ದೊಡ್ಡ ಸಾಧನೆ ಎಂದೇ ಹೇಳಬೇಕು. ವ್ಯಾವಹಾರಿಕವೆನಿಸಿರುವ ಇಂದಿನ ಯಾಂತ್ರಿಕ ಬದುಕಿನಲ್ಲಂತೂ ನಮ್ಮನ್ನು ನಾವು ಅರಿಯುವ ಪ್ರಕ್ರಿಯೆಯಲ್ಲೇ ಬದುಕಿನ ಸಂಪೂರ್ಣ ಯಶಸ್ಸು, ಶಾಂತಿ, ನೆಮ್ಮದಿ ಅಡಗಿದೆ. ನಮ್ಮನ್ನು ನಾವು ಅರಿಯುವುದೆಂದರೆ ನಮ್ಮ ಮೂಲಭೂತ ಗುಣದೋಷಗಳನ್ನು ತಿಳಿದುಕೊಳ್ಳುವುದೇ ಆಗಿದೆ. ಸಾಮಾನ್ಯವಾಗಿ ನಾವು ನಮ್ಮ ಗುಣಗಳನ್ನು, ಎಂದರೆ ನಮ್ಮ ದೇಹ, ಮನಸ್ಸು ಹಾಗೂ ಬುದ್ಧಿಯ ಶಕ್ತಿ – ಸಾಮಥ್ರ್ಯವನ್ನು ತಿಳಿದುಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ. ಪರಿಣಾಮವಾಗಿ ಅತಿಯಾದ ಆತ್ಮವಿಶ್ವಾಸ ಹಾಗೂ ಸ್ವಯಂಪ್ರತಿಷ್ಠೆಯಿಂದ ಬೀಗುತ್ತಿರುತ್ತೇವೆ. ಇದರಿಂದಾಗಿ ಅಹಂಕಾರ, ಮದ, ಮತ್ಸರಗಳೂ ನಮ್ಮನ್ನು ಆಳುತ್ತಿರುತ್ತವೆ. ಹಾಗಾಗಿ ನಮ್ಮಲ್ಲಿನ ಈ ಪರಿಭಾವಿತ ಶಕ್ತಿ – ಸಾಮಥ್ರ್ಯಗಳಿಗೆ ಸಣ್ಣ ಪೆಟ್ಟು ಬಿದ್ದರೂ ಅದನ್ನು ತಡೆದುಕೊಳ್ಳುವ ಶಕ್ತಿ ನಮಗಿರುವುದಿಲ್ಲ. ಪರಿಣಾಮವಾಗಿ ಸಿಟ್ಟು, ಕೋಪ, ಹತಾಶೆ, ಜುಗುಪ್ಸೆಗಳಿಗೆ ಸುಲಭವಾಗಿ ಬಲಿಯಾಗುತ್ತೇವೆ. ಎಷ್ಟೋ ಸಂದರ್ಭಗಳಲ್ಲಿ ತಮ್ಮ ಸ್ವಯಂಪ್ರತಿಷ್ಠರಗೆ ಬಿದ್ದ ಸಣ್ಣ ಪೆಟ್ಟನ್ನು ಕೂಡ ಸಹಿಸಿಕೊಳ್ಳಲಾಗದ ದುರ್ಬಲರು ಅವಿವೇಕತನದಿಂದ ಆತ್ಮಹತ್ಯೆಯಂತಹ ಹೀನಕೃತ್ಯಕ್ಕೂ ಮುಂದಾಗುವುದಿದೆ. ಸ್ಪರ್ಧಾತ್ಮಕವಾದ ಇಂದಿನ ಆಧುನಿಕ ಯುಗದಲ್ಲಿ ಈ ಬಗೆಯ ಕ್ಷುಲಕ ಕಾರಣಗಳಿಗೆ ನಡೆಯುವ ಆತ್ಮಹತ್ಯೆಯ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಗೀತೋಪದೇಶದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದ ಎಚ್ಚರಿಕೆಯ ಮಾತನ್ನು ನಾವು ಗಮನಿಸಬೇಕು. ಅಂತಸ್ತು, ಐಶ್ವರ್ಯ, ಸ್ವಯಂಪ್ರತಿಷ್ಠೆಯೇ ಮುಂತಾದ ಕಾಮನೆಗಳ ಬೆನ್ನು ಹತ್ತಿದವನಿಗೆ ಅವುಗಳನ್ನು ಪಡೆಯುವಲ್ಲಿ ಅಡ್ಡಿ ಉಂಟಾದಾಗ ಸಹಜವಾಗಿಯೇ ಕೋಪ ಉಕ್ಕೇರುತ್ತದೆ. ಕೋಪದಿಂದ ಅವಿವೇಕದ ಭಾವ ಮೂಡುತ್ತದೆ. ಇದರಿಂದ ಸ್ಮರಣ ಶಕ್ತಿ ಕುಂಠಿತವಾಗುತ್ತದೆ. ಸ್ಮರಣಶಕ್ತಿಯ ನಾಶದಿಂದ ಜ್ಞಾನಶಕ್ತಿ ನಾಶವಾಗುತ್ತದೆ!