54. ಅಂತಃಕರಣದ ಅಂಕೆ
ಲೌಕಿಕ ಬದುಕಿನ ಮೂಲಭೂತ ಗುಣವೇನು ಎಂಬ ಬಗ್ಗೆಯೂ ನಾವು ತಿಳಿದಿರಬೇಕು. ಅಂತಸ್ತು, ಐಶ್ವರ್ಯ, ಸ್ವಯಂಪ್ರತಿಷ್ಠೆಯನ್ನು ಬಹುವಾಗಿ ಆಶಿಸುವುದು, ಅವು ಹಸ್ತವಾಗಬೇಕೆಂಬ ತೀವ್ರ ಕಾಮನೆಯನ್ನು ಬೆಳೆಸಿಕೊಳ್ಳುವುದು, ವಿಫಲರಾದಲ್ಲಿ ಏನನ್ನೂ ಮಾಡಲು ಹೇಸದಿರುವುದು, ಅದಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿಯಲೂ ಸಿದ್ಧರಿರುವುದು – ಇವೇ ಆ ಗುಣಾವಗುಣಗಳು. ಇದರ ಒಟ್ಟು ಪರಿಣಾಮದಲ್ಲಿ ನೈತಿಕ ಅಧಃಪತನ ಉಂಟಾಗುವುದಲ್ಲದೇ ಬೇರೇನೂ ಅಲ್ಲ. ಬದುಕಿನ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಅಂತಸ್ತು, ಐಶ್ವರ್ಯ, ಸ್ವಯಂ ಪ್ರತಿಷ್ಠೆಯಲ್ಲಿ ಇದೆ ಎಂದು ಭ್ರಮಿಸುವವರಿಗೆ ತಮ್ಮಲ್ಲಾಗುವ ನೈತಿಕ ಅಧಃಪತನದ ಅರಿವೇ ಇರಲಾರದು. ಇದರಿಂದಾಗಿ ಅವರು ಬದುಕಿನಲ್ಲಿ ಬಹುವಾಗಿ ಬಯಸಿದ ಐಶ್ವರ್ಯ, ಅಂತಸ್ತು ಪ್ರಾಪ್ತಿಯಾದಗಲೂ ಅವರು ಅಪೇಕ್ಷೆ ಪಟ್ಟ ಸುಖ, ಶಾಂತಿ, ನೆಮ್ಮದಿ ಲಭಿಸಿರುವುದಿಲ್ಲ. ಸಿರಿ – ಸಂಪತ್ತಿನ ಬೆನ್ನುಬಿದ್ದು ಅದನ್ನು ಹೇಗೋ ಗಳಿಸಿಕೊಂಡ ಅದೆಷ್ಟೋ ಮಂದಿ ತಮಗೆ ಬದುಕಿನಲ್ಲಿ ಎಲ್ಲವೂ ಸಿಕ್ಕಿತು. ಆದರೆ ಸುಖ – ಶಾಂತಿ – ನೆಮ್ಮದಿ ಮಾತ್ರ ಸಿಗಲಿಲ್ಲ ಎಂದು ಉದ್ಗರಿಸುವುದನ್ನು ನಾವು ಕಾಣುತ್ತಿಲ್ಲವೆ? ಅದಕ್ಕೆ ಕಾರಣ ಇಷ್ಟೇ. ಬದುಕಿನಲ್ಲಿ ನಾವು ಹಾಕಿಕೊಳ್ಳುವ ಗುರಿಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳು ಸಮಾನ ಪಾವಿತ್ರ್ಯವನ್ನು ಹೊಂದಿರಬೇಕು. ಮಾರ್ಗ ಅಪವಿತ್ರವಿದ್ದು ಗುರಿ ಪವಿತ್ರವಿದ್ದರೆ ಸಾಲದು. ಇಷ್ಟಕ್ಕೂ ಧನ – ಕನಕ, ಸಿರಿ – ಸಂಪತ್ತು ನಮ್ಮಲ್ಲಿ ಶೇSರಣೆಯ ಮೂಲ ಪ್ರವೃತ್ತಿಯನ್ನು ಹೆಚ್ಚಿಸಿ ಮೋಹ – ಲೋಭವನ್ನು ಹೆಚ್ಚಿಸುವುದೇ ವಿನಾ ನಿಜವಾದ ಆನಂದ, ಶಾಂತಿಯನ್ನು ತಂದುಕೊಡಲಾರವು. ಇದಕ್ಕೆ ಮೂಲಭೂತವಾಗಿ ಬೇಕಾದದ್ದು ಸಮತ್ವದ ಮನೋಭಾವ. ಗೀತೆಯಲ್ಲಿ ಕೃಷ್ಣ ಜಾಗೃತಗೊಳಿಸುವ ಪ್ರಜ್ಞೆ ಇದೇ ಆಗಿದೆ. ಅಂತಃಕರಣವನ್ನು ಸ್ವಾಧೀನದಲ್ಲಿಟ್ಟುಕೊಂಡವನು ಮಾತ್ರವೇ ರಾಗದ್ವೇಷಗಳಿಂದ ಮುಕ್ತನಾಗಿರಬಲ್ಲ. ಈ ಮೂಲಕ ಮಾತ್ರವೇ ಅಂತಃಕರಣದಲ್ಲಿ ಪ್ರಸನ್ನತೆಯನ್ನು ಅರ್ಥಾತ್ ಸ್ವಚ್ಛತೆಯನ್ನು ಆತ ಪಡೆಯಬಲ್ಲ.