-
ನಮ್ಮೊಳಗಿನ ದೇವ
ನಮ್ಮ ಬದುಕಿನ ಸಮಸ್ತ ಚಟುವಟಿಕೆಗಳನ್ನು ದೇವರ ಪ್ರೀತ್ಯರ್ಥವಾಗಿ ಕರ್ತವ್ಯರೂಪದಲ್ಲಿ ನಾವು ಮಾಡುತ್ತಿದ್ದೇವೆ ಎಂದು ನಾವು ಏಕೆ ಭಾವಿಸಬೇಕು? ಈ ಪ್ರಶ್ನೆ ಇಂದಿನ ವಿಜ್ಞಾನ ಯುಗದಲ್ಲಿ ಹಲವರನ್ನು ಕಾಡಿದರೆ ಅಚ್ಚರಿ ಇಲ್ಲ. ನಾವು ಈ ಬುವಿಯಲ್ಲಿ ಜನಿಸುವ ಮೊದಲು ಏನಾಗಿದ್ದೆವು ಮತ್ತು ಸತ್ತ ಬಳಿಕ ಏನಾಗುವೆವು ಎಂಬ ಬಗ್ಗೆ ಯೋಚನೆಗೆ ತೊಡಗಿದರೆ ನಮಗೆ ಉತ್ತರ ಸಿಗಲಾರದು. ಹಾಗೆಂದು ನಾವು ಬದುಕಿರುವ ಈ ಜೀವಿತಾವಧಿ ಮಾತ್ರವೇ ಸತ್ಯವಾದದ್ದು. ಉಳಿದದ್ದೆಲ್ಲವೂ ಮಿಥ್ಯ ಎಂದು ಭಾವಿಸಿದರೆ ಅದೆಷ್ಟು ಸರಿ ಎನಿಸಬಹುದು? ನಾವು ಈ ಭುವಿಯಲ್ಲಿ ಜನಿಸಿರುವುದು ನಿಷ್ಕಾರಣವಾಗಿ ಅಲ್ಲ ಎಂಬ ಮಾತಂತೂ ಸತ್ಯ. ಪವಿತ್ರ ಬೈಬಲ್‍ನಲ್ಲಿ ಒಂದು ಮಾತಿದೆ. ನೀನು ಈ ಭೂಮಿಯಲ್ಲಿ ಜನಿಸಿ ಬಂದಿರುವುದು ನೀನು ಅಪೇಕ್ಷೆಪಟ್ಟ ಕಾರಣಕ್ಕೆ ಅಲ್ಲ. ಮಹಾಮಹಿಮನಾದ ಆ ಭಗವಂತನು ಬಯಸಿದ ಕಾರಣಕ್ಕೆ! ಈ ಮಾತನ್ನು ನಾವು ಗಂಭೀರವಾಗಿ ಚಿಂತಿಸಿದರೆ ನಮ್ಮ ಜೀವಿತಾವಧಿಯು ಎಷ್ಟು ಅಮೂಲ್ಯವಾದದ್ದು ಎಂಬ ಅಂಶ ನಮಗೇ ಗೋಚರವಾಗುತ್ತದೆ. ಭಗವಂತನ ಸೃಷ್ಟಿಯಲ್ಲಿ ಮನುಷ್ಯನೊಬ್ಬನೇ ಸಂಪೂಣ್ವಾಗಿ ವಿಕಸನ ಹೊಂದಿರುವ ಜೀವಿ. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ – ಹೀಗೆ ನಾಲ್ಕು ವಿಭಿನ್ನ ಸ್ತರಗಳಲ್ಲಿ ಆತ ಔನ್ನತ್ಯವನ್ನು ಸಾಧಿಸಬಲ್ಲ. ತನ್ನ ಬುದ್ಧಿಶಕ್ತಿ, ಕ್ರಿಯಾಶೀಲತೆ ಹಾಗೂ ಸೃಷ್ಟಿಶೀಲತೆಯಿಂದಾಗಿ ಆತ ತನ್ನದೇ ಸಮಾಜವನ್ನು, ಸಂಸ್ಕøತಿಯನ್ನು ರೂಪಿಸಿಕೊಳ್ಳಬಲ್ಲ. ಇವೆಲ್ಲವೂ ಆತನಿಗೆ ಸಾಧ್ಯವಾದದ್ದು ಹೇಗೆ? ಭಗವಂತನ ವಿಶೇಷ ಅನುಗೃಹ ಇಲ್ಲದೇ ಆತನಿಗೆ ಇಷ್ಟೆಲ್ಲ ಮಾಡಲು ಸಾಧ್ಯವಾಯಿತೆ? ಈ ಬಗ್ಗೆ ಕೂಲಂಕಷವಾಗಿ ಆಲೋಚಿಸಬೇಕಾದರೆ ನಮ್ಮೊಳಗೇ ಇರುವ ಆ ದೇವನನ್ನು ಕಾಣಲು ನಾವು ಪ್ರಯತ್ನಿಸಬೇಕು.