-
ಸುಖವೆಂಬ ಮರೀಚಿಕೆ
ಪ್ರತಿಯೊಂದು ಜೀವಿಯಲ್ಲೂ ಜೀವಾತ್ಮನಾಗಿ ನೆಲೆಸಿರುವ ಪರಮಾತ್ಮನ ಅಂಶವನ್ನು ಕಾಣುವುದು ಸುಲಭ ಸಾಧ್ಯವಲ್ಲ. ಸದಾ ಪ್ರಾಪಂಚಿಕ ಬದುಕಿಗೆ ಅಂಟಿಕೊಂಡೇ ಇರುವ ನಮಗೆ, ನಾವೆಂದರೆ ‘ದೇಹ’ವೇ ಆಗಿರುವುದರಿಂದ ದೇಹಕ್ಕಿಂತ ಭಿನ್ನವಾದ ಅಸ್ತಿತ್ವ ನಮಗೆ ಇದ್ದೀತು ಎಂಬ ಕಲ್ಪನೆಯೂ ನಮ್ಮಲ್ಲಿ ಮೂಡುವುದಿಲ್ಲ. ದೇಹದ ಸುಖ – ಸೌಕರ್ಯಗಳೇ ನಿಜವಾದ ಸುಖವೆಂಬ ಭ್ರಮೆಯಲ್ಲಿ ಬದುಕುವ ನಮಗೆ ನಿರಂತರ ಭೌತಿಕ ಸುಖಭೋಗ ಗಳನ್ನು ಅರಸುವುದೇ ಮುಖ್ಯವಾಗುತ್ತದೆ. ಹಾಗಾಗಿ ದೇಹಕ್ಕೆ ಸುಖ ಕೊಡುವ ಪರಿಕರಗಳು, ಸಾಧನಗಳು, ಯಂತ್ರೋಪಕರಣಗಳನ್ನು ಖರೀದಿಸಿ ಸಂಗ್ರಹಿಸಿಡುವ ಪ್ರವೃತ್ತಿ ನಮ್ಮದಾಗಿದೆ. ಅದು ಕೇವಲ ಪ್ರವೃತ್ತಿ ಮಾತ್ರವೇ ಅಲ್ಲ. ಪರಸ್ಪರರ ನಡುವಿನ ಸ್ಪರ್ಧೆಯೂ ಆಗಿ ಬಿಟ್ಟಿದೆ. ಹಾಗಾಗಿ ನಾವು ಭೌತಿಕ ಸುಖ – ಸಾಧನಗಳ ಖರೀದಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಾಧಾನ್ಯವನ್ನು ನೀಡುತ್ತಿದ್ದೇವೆ. ಒಮ್ಮೆ ಖರೀದಿಸಿದ ಭೌತಿಕ ಸುಖ ಸಾಧನಗಳು ಸ್ಪಲ್ಪವೇ ಸಮಯದ ಬಳಿಕ ಹಳತಾಗುತ್ತಲೇ ಅಲ್ಲಿಯವರೆಗೆ ಅನುಭವಿಸಿದ ‘ಸುಖ’ ಅನಂತರ ದುಃಖಕ್ಕೆ ಹೇತವಾಗುತ್ತದೆ. ಪರಿಣಾಮವಾಗಿ ನಿಜವಾದ ಸುಖ ಎಲ್ಲಿದೆ ಎಂಬ ಗೊಂದಲಕ್ಕೆ ಗುರಿಯಾಗುತ್ತೇವೆ. ಇಷ್ಟಕ್ಕೂ ನಿಜವಾದ ಸುಖ ನಮ್ಮ ಮನಸ್ಸಿನೊಳಗೇ ಇದೆ ಎನ್ನುವುದು ಸತ್ಯ. ಅದು ನಮ್ಮ ಹೃದಯದೇಗುಲದಲ್ಲಿ ನೆಲೆಸಿರುವ ಪರಮಾತ್ಮನನ್ನು ಕಾಣಲು ಯತ್ನಿಸುವ ಪ್ರಕ್ರಿಯೆಯಲ್ಲೇ ಇದೆ. ಇದನ್ನು ಅರಿಯದೆ ನಾವು ಬೆನ್ನುಹತ್ತುವ ‘ಸುಖ’ ನಮ್ಮ ಪಾಲಿಗೆ ಕೇವಲ ಮರೀಚಿಕೆಯಲ್ಲದೆ ಬೇರೇನೂ ಅಲ್ಲ. ಆದರೆ ಹೃದಯ ದೇಗುಲಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತೇ? ಹೊರಗಿನ ಪ್ರಪಂಚದೊಂದಿಗಿನ ಸಂಬಂಧಗಳನ್ನು ಸ್ವಲ್ಪಹೊತ್ತಿಗಾದರೂ ಕಡಿದುಕೊಳ್ಳಲು ಪ್ರಯತ್ನಿಸಬೇಕು.