Home » ಸ್ಥಿತ್ಯಂತರವೆಂಬ ಸತ್ಯ
 

ಸ್ಥಿತ್ಯಂತರವೆಂಬ ಸತ್ಯ

by Kundapur Xpress
Spread the love
  1. ಸ್ಥಿತ್ಯಂತರವೆಂಬ ಸತ್ಯ

ನಾವು ಸುಖವೆಂಬ ಮರೀಚಿಕೆಯ ಬೆನ್ನುಹತ್ತಿ ಹೋಗಲು ಮುಖ್ಯ ಕಾರಣವೇ ನಮ್ಮ ಪಂಚೇಂದ್ರಿಯಗಳು. ನಮ್ಮ ಬದುಕಿನ ಸಮಸ್ತ ಕಾಮನೆಗಳು ಪಂಚೇಂದ್ರಿಯಗಳಲ್ಲಿ ಮನೆ ಮಾಡಿವೆ. ಅವುಗಳು ಅನುಗಾಲವೂ ವ್ಯಕ್ತವಡಿಸುವ ಬಯಕೆಗಳನ್ನು ಪೂರೈಸುವುದರಲ್ಲೇ ನಮ್ಮ ಜೀವಮಾನ ವಿನಿಯೋಗವಾಗುತ್ತಿರುತ್ತದೆ. ಅಂತಸ್ತು, ಸಂಪತ್ತು, ಐಶರಾಮವನ್ನು ಅವು ಹಂಬಲಿಸುತ್ತಲೇ ಇರುತ್ತವೆ. ನೇರಮಾರ್ಗದಲ್ಲಿ ಅವು ಸಾಧಿತವಾಗದಿದ್ದರೆ ಅಡ್ಡಮಾರ್ಗದಲ್ಲಾದರೂ ಅವುಗಳನ್ನು ಪಡೆಯುವ ದುರಾಸೆ ಹುಟ್ಟುತ್ತಿರುತ್ತದೆ. ಅನೇಕರಿಗೆ ಯೌವನ ತಮ್ಮ ಕೈಜಾರಕೊಡದೆಂಬ ಮೋಹವಿದ್ದರೆ ಹಲವರಿಗೆ ಅಂತಸ್ತೇ ಸರ್ವಸ್ವ. ಇನ್ನು ಹಲವರಿಗೆ ಸಂಪತ್ತೇ ತಮ್ಮ ಅಸ್ತಿತ್ವದ ಪ್ರತೀಕ. ಇಷ್ಟಕ್ಕೂ ನಮ್ಮ ನಿಜವಾದ ಅಸ್ತಿತ್ವ ಯಾವುದು ಎಂಬ ಬಗ್ಗೆ ನಮಗೆ ಸಂದೇಹವೇ ಮೂಡುವುದಿಲ್ಲ. ನಮ್ಮ ಅಸ್ತಿತ್ವವನ್ನು ದೇಹಾಭಿಮಾನಿಗಳಾಗಿ, ಐಶ್ವರ್ಯವಂತರಾಗಿ ಇಲ್ಲವೇ ದೊಡ್ಡ ದೊಡ್ಡ ಹುದ್ದೆಯ ರೂಪದಲ್ಲಿ ಅಂತಸ್ತನ್ನು ಹೊಂದಿದವರಾಗಿ ಮಾತ್ರವೇ ಕಾಣುತ್ತೇವೆ. ಯೌವನ, ಅಂತಸ್ತು, ಐಶ್ವರ್ಯ ಕೈತಪ್ಪಿದಾಗ ನಮಗೆ ನಾವೇ ಅಪರಿಚಿತರೆನಿಸುವಷ್ಟು ಕಂಗಲಾಗಿ ಬಿಡುತ್ತೇವೆ. ಬದುಕಿನಲ್ಲಿ ಬದಲಾವಣೆಯೊಂದೆ ಶಾಶ್ವತ, ಬೇರೆ ಯಾವುದೂ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿರುವುದಿಲ್ಲ. ಸ್ಥಿತ್ಯಂತರದ ಇನ್ನೊಂದು ಹೆಸರೇ ಬದುಕು! ಇದನ್ನು ತಿಳಿಯದಿರುವುದರಿಂದಲೇ ಜೀವನಪೂರ್ತಿ ದುಃಖ, ನೋವು, ಹತಾಶೆ, ಜುಗುಪ್ಸೆಯಲ್ಲೇ ಕಳೆಯುತ್ತೇವೆ. ಇದರ ನಿವಾರಣೆ ಎಂತು? ಕೃಷ್ಣ ಅರ್ಜುನನಿಗೆ ಇದನ್ನೇ ಸ್ಪಷ್ಟಪಡಿಸುತ್ತಾನೆ. ಬದುಕಿನಲ್ಲಿ ಶುಭ ಉಂಟಾದಾಗ ಸಂತೋಷದಿಂದ ಬೀಗಬೇಡ. ಅಶುಭ ಉಂಟಾದಾಗ ನೋವುದುಃಖದಿಂದ ಕಮರಿಹೋಗಬೇಡ. ಸಂಕಷ್ಟ ಒದಗಿದಾಗ ಆಮೆ ತನ್ನ ಅಂಗಾಂಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ಇಂದ್ರಿಯಗಳು ಪ್ರಲೋಭನೆಗೆ ಗುರಿಯಾಗುವಾಗ ಅವುಗಳನ್ನು ನಿಯಂತ್ರಿಸಿಕೊಂಡು ಒಳಕ್ಕೆ ಸೆಳೆದುಕೊಳ್ಳುವುದೊಂದೇ ಉಪಾಯ.

   

Related Articles

error: Content is protected !!