ನಿಜಕ್ಕಾದರೆ ಮನಸ್ಸನ್ನು ಅರಿಯುವುದೇ ಒಂದು ದೊಡ್ಡ ತಪಸ್ಸು. ಸುಖ-ದುಃಖವನ್ನು ಸಮಭಾವದಿಂದ ಸ್ವೀಕರಿಸಲು ಮನಸ್ಸಿನ ಮೇಲೆ ಹಿಡಿತ ಅಗತ್ಯ. ಆದರೆ ಮನಸ್ಸು ಅಷ್ಟು ಸುಲಭದಲ್ಲಿ ನಿಯಂತ್ರಣಕ್ಕೆ ಸಿಗುವುದುಂಟೆ? ಅದರಷ್ಟು ಚಂಚಲವಾದ್ದು ಬೇರೊಂದಿದೆಯೇ? ಮನಸ್ಸು ಇಷ್ಟೊಂದು ನಿಗೂಢವೇಕೆ? ಸೂಕ್ಷ್ಮವಾಗಿ ಯೋಚಿಸಿದರೆ ನಮಗೇ ಅದರ ಗುಟ್ಟು ಗೊತ್ತಾಗುತ್ತದೆ. ಮನಸ್ಸು ಕಾಮನೆಗಳ ಕಣಜ. ಸದಾ ಅದು ಯೋಚಿಸುವುದು, ಆಶಿಸುವುದು ಬಯಕೆಗಳನ್ನಲ್ಲದೆ ಬೇರೇನೂ ಅಲ್ಲ. ಆ ಬಯಕೆಗಳಾದರೋ ಅಗಣಿತ. ಒಂದು ಪೂರೈಸಲ್ಪಟ್ಟರೆ ಒಡನೆಯೇ ಅದರ ಸ್ಥಾನವನ್ನು ಅಕ್ರಮಿಸಲು ಕಾದಿರುವ ಬಯಕೆಗಳು ಸಾವಿರ. ಅದಕ್ಕೆಂದೇ ಮನಸ್ಸು ಸದಾ ಫಲಾಪೇಕ್ಷಿ. ಬಯಸಿದ ಫಲವು ಸಿಗಲು ವಿಳಂಬವಾದರೆ ಅಥವಾ ಸಿಗದೇ ಹೋದರೆ ಮನಸ್ಸು ವ್ಯಗ್ರಗೊಳ್ಳುವ ಪರಿ ಅಸಾಧಾರಣ. ಫಲಿತಾಂಶ? ಅತ್ಯಂತ ದಾರುಣ. ಮೈಮನವೀಡಿ ಕ್ರೋಧಾಗ್ನಿಯಿಂದ ದಹದಹಿಸಿ ನರಳುವ ದುಃಸ್ಥಿತಿ. ಸಿಟ್ಟು, ಉದ್ವೇಗ, ಕಳವಳದ ಪರಿತಾಪದಿಂದ ದೇಹ-ಮನಸ್ಸು ಪಡೆಯುವ ಅಸ್ವಾಸ್ಥ್ಯ ಅಸಹನೀಯ. ಇದು ನಮ್ಮ-ನಿಮ್ಮೆಲ್ಲರ ನಿತ್ಯ ದುಃಖ. ಇದಕ್ಕೆಲ್ಲ ಪರಿಹಾರವಿಲ್ಲವೇ? ಇಲ್ಲದೇ ಏನು? ನಿಶ್ಚಿತವಾಗಿಯೂ ಇದೆ. ಗೀತಾಚಾರ್ಯ ಶ್ರೀ ಕೃಷ್ಣನೇ ಅದಕ್ಕೆ ಪರಿಹಾರ ಸೂಚಿಸಿರುವಾಗ ಇನ್ನೇನು ಚಿಂತೆ. ಫಲ ಬಯಸಿ ಕರ್ಮಕ್ಕೆ ತೊಡಗಿದರೆ ಸುಖ ಮಾತ್ರ ದೊರೆಯುವುದಾದರೂ ಹೇಗೆ? ಅದರ ಜತೆಜತೆಗೇ ನೆರಳಿನಂತೆ ಬರುವ ದುಃಖವನ್ನೂ ನೀನು ಸ್ವೀಕರಿಸಬೇಕಾಗುತ್ತದೆ. ಆದುದರಿಂದ ಕರ್ಮ ಫಲಾಪೇಕ್ಷಿಯಾಗದೆ ಕರ್ಮ ಮಾಡುವುದರಲ್ಲಿ ಮಾತ್ರವೇ ಅಧಿಕಾರವನ್ನು ಹೊಂದಿರು. ಆ ಸಮಚಿತ್ತವೇ ನಿನಗೆ ಸಚ್ಚಿದಾನಂದವನ್ನು ತಂದು ಕೊಡುತ್ತದೆ.