- ಸಮತ್ತ್ವದಿಂದ ಮುಕ್ತಿ
ಬದುಕಿನಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಕರ್ತವ್ಯರೂಪದಲ್ಲಿ ಮಾಡಬೇಕಿದ್ದರೆ ನಮ್ಮಲ್ಲಿ ಮುಖ್ಯವಾಗಿ ಇರಬೆಕಾದ ಪ್ರಜ್ಞೆ ಯಾವುದು? ಅದು ದೇವಪ್ರಜ್ಞೆಯಲ್ಲದೆ ಬೇರೇನೂ ಅಲ್ಲ. ನಮ್ಮ ದೈನಂದಿನ ಬದುಕಿನ ಕಾರ್ಯಗಳೆಲ್ಲವೂ ದೇವರನ್ನು ನೆನೆಯುವ ಮೂಲಕವೇ ಆರಂಭವಾಗಬೇಕು. ಇಡಿಯ ದಿನದ ಸಮಸ್ತ ಕಾರ್ಯಚಟುವಿಟಿಕೆಗಳು ನಿರ್ವಿಘ್ನವಾಗಿ ನಡೆಯಲೆಂದು ದೇವರಲ್ಲಿ ಬೇಡಿಕೊಳ್ಳಬೇಕು. ದಿನವಿಡೀ ಮನಸ್ಸು ಪ್ರಸನ್ನವಾಗಿರಲೆಂದು ಹಾರೈಸಬೇಕು. ಮನಸ್ಸು ಖಿನ್ನವಾದರೆ ಅದರ ಪರಿಣಾಮ ಇಡಿಯ ದೇಹದ ಮೇಲೆ ಉಂಟಾಗುತ್ತದೆ. ದೇಹದ ಆರೋಗ್ಯ ಸಂಪೂರ್ಣವಾಗಿ ಮನಸ್ಸಿನ ಸಂತೋಷದ ಮೇಲೆಯೇ ನಿಂತಿದೆ. ಆದುದರಿಂದ ಮನಸ್ಸಿನ ಸಮತ್ವವನ್ನು ಕಾಯ್ದುಕೊಳ್ಳುವುದರಲ್ಲೇ ಬದುಕಿನ ಶಾಂತಿ – ಸುಖ – ಸಮಾಧಾನಗಳಿವೆ. ಆದರೆ ದಿನನಿತ್ಯವೆಂಬಂತೆ ನಾವು ಚಿಕ್ಕಪುಟ್ಟ ವಿಷಯಗಳಿಗೆಲ್ಲ ಬಂಧು – ಮಿತ್ರರೊಡನೆ, ಸ್ನೇಹಿತರೊಡನೆ, ಕೊನೆಗೂ ಅಪರಿಚಿತರೊಡನೆ ಕೂಡ ಮನಸ್ತಾಪ ಮಾಡಿಕೊಳ್ಳುತ್ತೇವೆ. ಸಿಟ್ಟು – ಸೆಡವು ತೋರಿಸುತ್ತೇವೆ. ನಮ್ಮಲ್ಲಿನ ಸ್ವಾರ್ಥ ಪರತೆಯೇ ಇದಕ್ಕೆ ಮೂಲ ಕಾರಣ. ಇಷ್ಟಕ್ಕೂ ಸಮತ್ತ್ವದ ಬುದ್ಧಿ ನಮಗೆ ಏಕೆ ಬೇಕು? ಇದರ ಹಿಂದಿನ ಗಹನವಾದ ಕಾರಣವನ್ನು ಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿ ಹೇಳುತ್ತಾನೆ. ಸಮತ್ತ್ವದ ಬುದ್ಧಿ ಉಳ್ಳವನು ಪಾಪ – ಪುಣ್ಯಗಳೆರಡನ್ನೂ ಈ ಲೋಕದಲ್ಲಿಯೇ ಬಿಟ್ಟುಬಿಡುತ್ತಾನೆ. ಪಾಪ – ಪುಣ್ಯಗಳೆರಡನ್ನೂ ಈ ಲೋಕದಲ್ಲಿ ಬಿಡುವುದರಿಂದ ಆಗುವ ಪರಿಣಾಮ ಏನು? ಪ್ರಾಯಶಃ ನಮ್ಮ ಸಮಾನ್ಯ ಚಿಂತನೆಗೆ ಇದರ ಅರಿವು ಆಗಲಾರದು. ಆದರೆ ಕೃಷ್ಣ ಹೇಳುತ್ತಾನೆ. ಸಮತ್ತ್ವದ ಬುದ್ಧಿಯಿಂದ ಫಲಾಪೇಕ್ಷೆ ಇಲ್ಲದೆ ಕರ್ಮಕ್ಕೆ ತೊಡಗಲು ಸಾಧ್ಯವಾಗುತ್ತದೆ. ಆದರಿಂದಾಗಿ ಜನ್ಮರೂಪೀ ಬಂಧನದಿಂದ ಬಿಡುಗಡೆಯೂ ದೊರಕುತ್ತದೆ.