- ಶಾಶ್ವತ ದೇವ ಸನ್ನಿಧಿ
ಆನಂದಮಯ ಬದುಕಿಗೆ ಮೂಲಭೂತವಾಗಿ ಅವಶ್ಯವಾಗಿರುವುದು ಸಮತ್ವದ ಮನೋಭಾವ ಎನ್ನಬಹುದಾದರೆ ಸಮತ್ವದ ಮನೋಭಾವವನ್ನು ನಾವು ಧರ್ಮದ ಪಥದಲ್ಲಿ ನಡೆಯುವ ಮೂಲಕವೇ ಪಡೆಯಬಹುದಾಗಿದೆ ಎನ್ನಬಹುದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎನ್ನುವ ನಾಲ್ಕು ಪುರುಷಾರ್ಥಗಳು ಒಂದರ ಮೂಲಕ ಮತ್ತೊಂದನ್ನು ಸಾಧಿಸುವಂತಹವು. ಮೊದಲೇ ಹೇಳಿದಂತೆ ಧರ್ಮವೆಂದರೆ ಸೂಕ್ಷ್ಮವಾಗಿ ಯಾವುದು ಅಧರ್ಮವಲ್ಲವೋ ಅದು. ಧರ್ಮದ ಮಾರ್ಗದಿಂದಲೇ ಅರ್ಥ, ಎಂದರೆ ಸಂಪತ್ತನ್ನು ಗಳಿಸಬೇಕು. ಕಾಮನೆಗಳ ಮೇಲೆ ಅಂಕುಶ ಹಾಕಿದಾಗಲೇ ಗಳಿಸಿದ ಸಂಪತ್ತಿನ ಸದ್ವಿನಿಯೋಗ ಸಾಧ್ಯವಾಗುವುದು. ಅಂತಿಮವಾಗಿ ಧರ್ಮಕ್ಕೆ ಬದ್ಧವಾಗಿ ಬದುಕುವ ಮೂಲಕವೇ ಮೋಕ್ಷ ಪ್ರಾಪ್ತಿ ಸಾಧ್ಯವಾಗುವುದು. ಮೋಕ್ಷವೆಂದರೆ ಮರಣವೆಂದರ್ಥವಲ್ಲ. ಮರಣ ಕೇವಲ ದೇಹಕ್ಕೆ ಸಂಬಂಧಿಸಿದ ವಿಷಯ. ಹುಟ್ಟಿನ ಮೂಲಕ ಅಸ್ತಿತ್ವ ಪಡೆದ ದೇಹ, ಪ್ರಕೃತಿ ಸಹಜವಾಗಿ ಬೆಳೆದು ಕೊನೆಗೆ ವೃದ್ಧಾಪ್ಯಕ್ಕೆ ಗುರಿಯಾಗಿ ಸಾವಿನಲ್ಲಿ ಅಂತ್ಯವನ್ನು ಕಾಣುತ್ತದೆ. ಮೋಕ್ಷವೆಂದರೆ ಹುಟ್ಟು–ಸಾವಿನ ಚಕ್ರದಿಂದ ಮುಕ್ತಿ ಪಡೆಯುವುದೆಂದೇ ಅರ್ಥ. ‘ಪುನರಪಿ ಜನನಂ ಪನರಪಿ ಮರಣಂ’ ಎಂಬ ಸಂಚಿತಕರ್ಮಗಳ ಬಂಧನದಿಂದ ಪಡೆಯುವ ಮುಕ್ತಿಯೇ ಮೋಕ್ಷ. ಆದರೆ ಬದುಕಿನ ಉದ್ದಕ್ಕೂ ನಾವು ಪುಣ್ಯ ಸಂಚಯನಕ್ಕಾಗಿ ನಾನಾ ಬಗೆಯ ಯಜ್ಞಯಾಗಾದಿಗಳನ್ನು, ಹೋಮ–ಹವನಗಳನ್ನು ಕೈಗೊಳ್ಳುತ್ತೇವೆ. ಆ ಪುಣ್ಯದ ಬಲದಲ್ಲಿ ಸ್ವರ್ಗದಲ್ಲಿ ನಮಗೆ ಸ್ಥಾನ ಸಿಗಲೆಂದು ಹಂಬಲಿಸುತ್ತೇವೆ. ಆದರೆ ಗಳಿಸಿದ ಪುಣ್ಯ ಕರಗುತ್ತಲೇ ಮತ್ತೆ ಇದ್ದಲ್ಲಿಗೇ ಮರಳುತ್ತೇವೆ! ಅದಕ್ಕೇ ಕೃಷ್ಣ ಗೀತೋಪದೇಶದಲ್ಲಿ ಹೇಳುತ್ತಾನೆ. ಸಮತ್ವ ಬುದ್ಧಿಯುಳ್ಳವನು ಪಾಪ–ಪುಣ್ಯಗಳೆರಡನ್ನೂ ಈ ಲೋಕದಲ್ಲಿಯೆ ಬಿಟ್ಟು ಬಿಡುತ್ತಾನೆ. ಕರ್ಮಬಂಧನದಿಂದ ಬಿಡುಗಡೆ ಹೊಂದಲು, ಜನನ – ಮರಣಗಳ ಚಕ್ರದಿಂದ ಪಾರಾಗಿ ಶಾಶ್ವತ ದೇವ ಸನ್ನಿಧಿಯನ್ನು ಪಡೆಯಲು ಸಮತ್ವ ಬುದ್ಧಿರೂಪಿಯಾದ ಕರ್ಮಯೋಗ ಅತ್ಯಂತ ಸೂಕ್ತ.