- ಮನಸ್ಸಿನ ನೈರ್ಮಲ್ಯ
ನಮ್ಮ ಹೃದಯ ದೇಗುಲವನ್ನು ಬೆಳಗುವ ಆತ್ಮಜ್ಞಾನದ ಬೆಳಕಿನಲ್ಲಿ ನಾವು ನಮ್ಮೊಳಗಿನ ದೇವರನ್ನು ಕಾಣಬಹುದು ಮಾತ್ರವಲ್ಲ ಪ್ರತಿಯೊಂದು ಜೀವಿಯಲ್ಲೂ ನೆಲೆಸಿರುವ ಪರಮಾತ್ಮನನ್ನೂ ಕಾಣಬಹುದು ಎಂದು ಗೀತೆ ಸಾರುತ್ತದೆ. ನಮ್ಮೊಳಗಿರುವ ದೇವರನ್ನು ಕಾಣಲು ನಾವು ಯೋಗಿಗಳಾಗಬೇಕು ಎಂದು ಕೃಷ್ಣ ಹೇಳುತ್ತಾನೆ. ಯೋಗಿಗಳಾಗ ಬೇಕೆಂದರೆ ಹಿಮಾಲಯಕ್ಕೆ ಹೋಗಿ ಅಲ್ಲಿ ಘೋರವಾದ ತಪಸ್ಸನ್ನು ಕೈಗೊಳ್ಳಬೇಕು ಎಂದು ನಾವು ಭಾವಿಸಬೇಕಾಗಿಲ್ಲ. ಕೃಷ್ಣನ ಆದೇಶದ ಅನುಸಾರ ನಾವು ಕರ್ಮಯೋಗಿಗಳಾಗಬಹುದು, ಜ್ಞಾನಯೋಗಿಗಳಾಗಬಹುದು, ರಾಜ ಯೋಗಿಗಳೂ ಆಗಬಹುದು. ಏಕನಿಷ್ಠೆ ಮತ್ತು ಶ್ರದ್ಧೆಯಿಂದ ಫಲಾಪೇಕ್ಷೆಯಿಲ್ಲದೆ ನಾವು ನಮ್ಮ ದೈನಂದಿನ ಬದುಕಿನಲ್ಲಿ ಮಾಡುವ ಎಲ್ಲ ಒಳ್ಳೆಯ ಕೆಲಸಗಳು ತಪಸ್ಸಿಗೆ ಸಮಾನವಾಗಿವೆ ಎಂಬ ಅಂಶ ಕರ್ಮಯೋಗಿಗೆ ಮುಖ್ಯ. ನಾವು ಮಾಡುವ ಕೆಲಸಕಾರ್ಯಗಳಲ್ಲಿ ಏಕನಿಷ್ಠೆಯನ್ನು ಹೊಂದಬೇಕಾದರೆ ಮನಸ್ಸಿನ ಚಾಂಚಲ್ಯಕ್ಕೆ ಮೊದಲು ಕಡಿವಾಣವನ್ನು ಹಾಕಬೇಕು. ಎಂದರೆ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬೇಕು. ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬೇಕಾದರೆ ಮನಸ್ಸೆಂಬ ಸರಸ್ಸಿನಲ್ಲಿ ಕಾಮನೆಗಳೆಂಬ ತರಂಗಗಳು ಮೂಡದಂತೆ ನೋಡಿಕೊಳ್ಳಬೇಕು. ಹಾಗೆ ಮಾಡಬೇಕಿದ್ದರೆ ಮನಸ್ಸಿನಲ್ಲಿ ಸದಾ ದೇವನೊಬ್ಬನನ್ನೇ ನೆನೆಯಬೇಕು. ಆದುದರಿಂದಲೇ ಕೃಷ್ಣ ಹೇಳುತ್ತಾನೆ. ‘ಯಾವಾಗ ನಿನ್ನ ಬುದ್ಧಿಯು ಮೋಹ ರೂಪೀ ಕೊಚ್ಚಿಯನ್ನು ಪೂರ್ಣವಾಗಿ ದಾಟಿ ಪಾರಾಗುವುದೋ ಆಗ ಮಾತ್ರವೇ ನಿನ್ನಲ್ಲಿ ಇಹ – ಪರ ಸಂಬಂಧಗಳ ಕುರಿತಾದ ಎಲ್ಲ ಫಲಗಳ ಬಗ್ಗೆ ವೈರಾಗ್ಯ ಹುಟ್ಟುತ್ತದೆ’. ಮೋಹರೂಪೀ ಕೊಚ್ಚೆ ಎಂದರೆ ನಮ್ಮೆಲ್ಲ ಇಂದ್ರಿಯ ಸಹಜ ಕಾಮನೆಗಳು. ದೇವಸ್ಥಾನಕ್ಕೆ ಹೋದರೂ, ದೇವತಾ ಪ್ರಾರ್ಥನೆಗೆ ಕುಳಿತರೂ ನಮ್ಮ ಮನಸ್ಸನ್ನು ನಿರಂತರವಾಗಿ ಬೇರೆಡೆಗೆ ಸೆಳೆದುಕೊಂಡು ಹೋಗುವುದು ಇದೇ ಮೋಹರೂಪೀ ಕೊಚ್ಚೆ ವಿನಾ ಬೇರೇನೂ ಅಲ್ಲ.