- ಮೋಹದ ವೃದ್ಧಿ
ಸಂಪತ್ತಿನ ಮೂಲ ಗುಣವೇನು ಎಂಬುದನ್ನು ನಾವು ಅರಿಯಬೇಕು. ವೃದ್ಧಿಯೇ ಅದರ ಪ್ರಧಾನ ಗುಣ. ವೃದ್ಧಿ ಎಂದರೆ ಕೇವಲ ಸಂಪತ್ತಿನ ವೃದ್ಧಿ ಎಂದು ತಿಳಿಯಬಾರದು. ಆ ಸಂಪತ್ತು ಯಾರಲ್ಲಿ ಇದೆಯೋ ಅವನಲ್ಲಿ ಲೋಭ, ಮೋಹ, ಮದ, ಮತ್ಸರಗಳೆಂಬ ದುರ್ಗುಣಗಳೆಲ್ಲವೂ ಸಂಪತ್ತು ವೃದ್ಧಿಸಿದಂತೆ ವೃದ್ಧಿಸುತ್ತಲೇ ಹೋಗುತ್ತವೆ. ತನ್ನಲ್ಲಿನ ಸಂಪತ್ತನ್ನು ಜೋಪಾನವಾಗಿ ಕಾಯ್ದಿರಿಸುವ ಮೋಹ ಒಂದೆಡಯಾದರೆ ಅದು ಪರರ ಕೈವಶವಾಗಬಾರದು ಎಂಬ ಲೋಭ ಮತ್ತೊಂದಡೆ. ಇನ್ನೊಂದೆಡೆ ಇರುವ ಸಂಪತ್ತನ್ನು ಯಾವ ಉಪಾಯದಿಂದಾದರೂ ಹೆಚ್ಚಿಸುತ್ತಲೇ ಇರಬೇಕೆಂಬ ದಾಹ ವೃದ್ಧಿಸುತ್ತದೆ. ಇಷ್ಟಕ್ಕೂ ಸಂಪತ್ತಿನಿಂದ ಖರೀದಿಸಲು ಸಾಧ್ಯವಾಗುವುದು ಭೌತಿಕ ವಸ್ತುಗಳೇ ವಿನಾ ಬೇರೇನೂ ಅಲ್ಲ. ಪ್ರೀತಿ, ಪ್ರೇಮ, ಆನಂದ ಯಾವುದನ್ನೂ ಸಂಪತ್ತಿನಿಂದ ಕೊಳ್ಳಲಾರೆವು. ಆದರೆ ಸಾಕಷ್ಟು ಶತ್ರುಗಳನ್ನು ಪಡೆಯಬಲ್ಲೆವು. ಬಂಧು – ಬಾಂಧವರನ್ನೇ ತರೆಮರೆಯ ಶತ್ರುಗಳನ್ನಾಗಿ ರೂಪಾಂತರಿಸಬಲ್ಲೆವು. ಸಂಪತ್ತಿನಿಂದ ನಾವು ಖರೀದಿಸಬಹುದಾದ ಭೋಗಲಾಲಸೆಯ ಭೌತಿಕ ಬಸ್ತುಗಳು, ಸಲಕರಣೆಗಳು ದೇಹದ ಆರೋಗ್ಯವನ್ನು ನಿಧಾನವಾಗಿ ಹಾಳು ಮಾಡುವ ‘ಸೌಕರ್ಯ’ಗಳನ್ನು ಕೊಡಬಲ್ಲವೇ ವಿನಾ ಮನಶ್ಯಾಂತಿಯನ್ನಾಗಲೀ, ಸಂತೋಷ, ಸಂತೃಪ್ತಿಯನ್ನಾಗಲೀ ಕೊಡಲಾರವು. ಆದರೆ ನಾವಿದನ್ನು ಅರ್ಥಮಾಡಿಕೊಳ್ಳಲಾರೆವು. ಏಕೆಂದರೆ ನಾವಿಂದು ಭೋಗಲಾಲಸೆಯೇ ಪ್ರಧಾನ ಮೌಲ್ಯವಾಗಿರುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಪಕ್ಕದ ಮನೆಯ ಹೊಸ ಮಾಡೆಲ್‍ನ ಟಿವಿ, ಕಾರು, ಫ್ರಿಜ್ಜು, ಕುಶನ್ ಸೋಫಾ, ಡೈನಿಂಗ್ ಸೆಟ್ಟುಗಳನ್ನು ನೋಡಿದಾಕ್ಷಣವೇ ನಮ್ಮ ಮನಸ್ಸಿನ ಆರೋಗ್ಯ ಕೆಡುತ್ತದೆ. ನಮ್ಮ ಮನೆಯಲ್ಲಿ ಅವೆಲ್ಲವೂ ಇದ್ದರೂ ಅವು ಹಳೆಯದಾಗಿರುವ ಕಾರಣಕ್ಕೆ ನಮಗೆ ನಾಚಿಕೆ, ಮುಜುಗರ, ಅಸಹನೆ, ಅತೃಪ್ತಿ, ಹತಾಶೆಯೇ ಹೆಚ್ಚು. ಅಂತೆಯೇ ಅವುಗಳಿಂದ ಸಿಗುತ್ತಿರುವ ಸುಖ, ಸಂತೋಷ ನಗಣ್ಯ!