Home » ಕ್ಲೇಶದ ಮೂಲ
 

ಕ್ಲೇಶದ ಮೂಲ

by Kundapur Xpress
Spread the love
  1. ಕ್ಲೇಶದ ಮೂಲ

ನಮ್ಮ ದೌರ್ಬಲ್ಯಗಳನ್ನೂ ನಾವು ತಿಳಿದಿರುವುದು ಒಳ್ಳೆಯದು. ಸಾಮಾನ್ಯವಾಗಿ ಇತರರ ದುರಭಿಮಾನವನ್ನು ನಾವು ಎಂದೂ ಸಹಿಸಿಕೊಳ್ಳುವುದಿಲ್ಲ. ಆದರೆ ನಮ್ಮಲ್ಲಿರುವ ದುರಭಿಮಾನದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ನಮ್ಮ ಪ್ರಕಾರ ನಾವು ಯಾವತ್ತೂ ಸನ್ಮಾರ್ಗದಲ್ಲೇ ನಡೆಯುವರು. ನಮ್ಮ ವರ್ತನೆಯಲ್ಲಿ, ಇತರರೊಂದಿಗೆ ಸಂಪರ್ಕಸಂಹನದಲ್ಲಿ ನಮಗೆ ನಮ್ಮ ಯಾವತ್ತೂ ಲೋಪದೋಷಗಳು ಕಾಣಿಸುವುದಿಲ್ಲ. ಇತರರ ನಡೆ, ನುಡಿ, ವರ್ತನೆಯನ್ನು ನಾವು ಚೆನ್ನಾಗಿ ವಿಮರ್ಶಿಸುತ್ತೇವೆ. ಆದರೆ ನಮ್ಮನ್ನು ನಾವು ವಿಮರ್ಶೆಗೆ ಗುರಿಪಡಿಸುವುದಿಲ್ಲ. ಇದಕ್ಕೆ ಏನು ಕಾರಣ? ನಮ್ಮಲ್ಲಿನ ದುರಭಿಮಾನ! ಇದು ನಮ್ಮ ಮೂಲಭೂತ ಪ್ರವೃತ್ತಿ. ನಿಜಕ್ಕಾದರೆ ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ, ದುಃಖಗಳಿಗೆ ದುರಭಿಮಾನವೇ ಮೂಲವಾಗಿದೆ. ಮೋಹ ಮತ್ತು ಲೋಭದ ದೆಸೆಯಿಂದಾಗಿಯೇ ದುರಭಿಮಾನದ ಪ್ರವೃತ್ತಿ ನಮ್ಮಲ್ಲಿ ಆಳವಾಗಿ ಬೇರೂರಿದೆ. ನಮ್ಮ ಐಶ್ವರ್ಯ, ಅಧಿಕಾರ, ಅಂತಸ್ತು ಮತ್ತು ಯೌವನದ ಮದವೇ ನಮ್ಮ ದುರಭಿಮಾನಕ್ಕೆ ಹೇತು. ದುರಭಿಮಾನವನ್ನು ಮೆಟ್ಟಿ ನಿಲ್ಲದಿದ್ದರೆ ನಮಗೇ ನಾವೇ ಭಾರವಾಗಿ ಬಿಡುತ್ತೇವೆ. ದಿನಬೆಳಗಾದರೆ ಸಾಕು, ನಮಗೆ ಇತರರು ಕೊಡಲೇಬೇಕೆಂದು ಭಾವಿಸುವ ನಮಸ್ಕಾರ, ಮರ್ಯಾದೆ, ಗೌರವ, ಸ್ಥಾನಮಾನಕ್ಕೆ ಒಂದಿಷ್ಟು ಚ್ಯುತಿ ಬಂದರೂ ನಾವು ಸಹಿಸಿಕೊಳ್ಳಲಾರೆವು. ಒಳಗೊಳಗೇ ಸಿಟ್ಟು ಕುದಿಯಲಾರಂಭಿಸುತ್ತದೆ. ರಕ್ತ ಬಿಸಿಯಾಗತೊಡಗುತ್ತದೆ. ನನ್ನ ಅಧಿಕಾರ, ಅಂತಸ್ತು, ಐಶ್ವರ್ಯಕ್ಕೆ ಅನುಗುಣವಾದ iರ್ಯಾದೆ ಸಮಾಜದಲ್ಲಿ ನನಗೆ ಸಿಗುತ್ತಿಲ್ಲವೆಂದು ಸಿಡಿಮಿಡಿಗೊಳ್ಳ ತೊಡಗುತ್ತೇವೆ. ಪರಿಣಾಮವಾಗಿ ಮನಸ್ಸು ಮತ್ತು ದೇಹದ ಆರೋಗ್ಯ ಕೆಡಲು ತೊಡಗುತ್ತದೆ. ಎಲ್ಲರೊಡನೆ ಅನಗತ್ಯ ಕ್ಲೇಶ, ದ್ವೇಷ ಉಂಟಾಗುತ್ತದೆ. ತೊಡಕನ್ನು ನಿವಾರಿಸದೆ ನಾವು ಬದುಕನ್ನು ಆನಂದಮಯಗೊಳಿಸಲಾರೆವು. ನಮ್ಮ ಅಹಂಭಾವವನ್ನು ನಾವು ಗೆಲ್ಲವುದೊಂದೇ ಇದಕ್ಕಿರುವ ಉಪಾಯ.

   

Related Articles

error: Content is protected !!