- ದುರಹಂಕಾರದ ಮೂಲ
ಕರ್ಮದ ಕರ್ತೃ ನಾನೇ ಎಂಬ ಅಹಂಭಾವವನ್ನು ಬೆಳೆಸಿಕೊಂಡಾಕ್ಷಣ ಸಹಜವಾಗಿಯೇ ನಮ್ಮಲ್ಲಿ ದುರಹಂಕಾರ ಬಲಿಯತೊಡಗುತ್ತದೆ. ನಮ್ಮಲ್ಲಿನ ಶಕ್ತಿ – ಸಾಮಥ್ರ್ಯದ ಬಗ್ಗೆ ಅತಿಯಾದ ವಿಶ್ವಾಸವೂ ಉಂಟಾಗುತ್ತದೆ. ಅಧಿಕಾರ, ಅಂತಸ್ತು, ಸಂಪತ್ತಿನ ಬಗೆಗಿನ ಮದವೂ ಉಲ್ಬಣಿಸುತ್ತದೆ. ನಮ್ಮ ಕರ್ಮದ ಮೇಲಿನ ಅತಿಯಾದ ಮೋಹದಿಂದಾಗಿ ಟೀಕೆ – ವಿಮರ್ಶೆಗಳೂ ನಮಗೆ ಅಸಹನೀಯವಾಗುತ್ತದೆ. ನಮ್ಮ ಕರ್ಮಗಳೆಲ್ಲವೂ ಲೋಪ – ದೋಷಗಳಿಂದ ಸಂಪೂರ್ಣ ಹೊರತಾದುವುಗಳು ಎಂಬ ಭ್ರಮೆಯೂ ನಮ್ಮಲ್ಲಿ ಬೆಳೆಯುತ್ತದೆ. ಇದರಿಂದಾಗಿ ನಮ್ಮ ಕರ್ಮಗಳಿಂದ ನಿರ್ದಿಷ್ಟವಾದ ಫಲಿತಾಂಶ ಮತ್ತು ಪರಿಣಾಮವನ್ನು ನಾವು ಅಪೇಕ್ಷಿಸುತ್ತೇವೆ. ಕರ್ಮ ಫಲದ ಈ ಅಪೇಕ್ಷೆ ಕೇವಲ ಹಾರೈಕೆಯ ಅಥವಾ ಹಂಬಲದ ಸ್ವರೂಪವನ್ನು ಹೊಂದಿರುವುದಿಲ್ಲ. ಏಕೆಂದರೆ ಹಾರೈಕೆ ಮತ್ತು ಹಂಬಲದಲ್ಲಿ ವಿನಯದ ಅಂಶವೇ ಹೆಚ್ಚಿರುತ್ತದೆ. ಆದರೆ ನಿರ್ದಿಷ್ಟ ಕರ್ಮಫಲದ ಅಪೇಕ್ಷೆಯಲ್ಲಿ ಕರ್ಮದ ಕರ್ತೃವೆಂಬ ಅಹಂಕಾರದಿಂದಾಗಿ ‘ಫಲಿಥಾಂಶ’ದ ನಿರ್ಧಾರಕರೂ ನಾವೇ ಆಗಿಬಿಡುತ್ತೇವೆ. ನಿಜಕ್ಕಾದರೆ ಕರ್ಮಫಲದ ನಿರ್ಧಾರಕರು ನಾವು ಹೇಗೆ ತಾನೆ ಆಗಿರಲು ಸಾಧ್ಯ? ನಮ್ಮ ಪಾಲಿನ ಕರ್ಮಗಳನ್ನು ಮಾಡುವುದಷ್ಟೇ ನಮ್ಮಿಂದ ಸಾಧ್ಯ ವಿನಾ ಅವುಗಳ ನಿರ್ದಿಷ್ಟ ಕರ್ಮಫಲವನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ. ಅದು ನಮ್ಮ ವ್ಯಾಪ್ತಿಗೆ ಮೀರಿದ ವಿಷಯ. ವಿಚಿತ್ರವೆಂದರೆ ನಾವು ಈ ಸತ್ಯವನ್ನು ತಿಳಿಯುವ ಗೋಜಿಗೇ ಹೋಗುವುದಿಲ್ಲ. ಕರ್ಮದ ಕರ್ತೃ ನಾನೇ ಎಂಬ ಅಹಂಭಾವವನ್ನು ಬೆಳೆಸಿಕೊಂಡ ಪರಿಣಾಮವಾಗಿ ನಾವೇ ಕರ್ಮ ಫಲವನ್ನು ತೀರ್ಮಾನಿಸಿಬಿಡುತ್ತೇವೆ. ಹಾಗಾಗಿ ನಿರೀಕ್ಷಿತ ಕರ್ಮಫಲ ಒಂದಿಷ್ಟು ಕಡಿಮೆ ಉಂಟಾದರೂ ನಾವು ಅದನ್ನು ಸಹಿಸುವುದಿಲ್ಲ. ಅದರಲ್ಲಿ ವಿಧಿಯ ಕೈವಾಡವೇ ಇರಬೇಕೆಂದು ಆರೋಪಿಸುತ್ತೇವೆ. ದೇವರನ್ನೂ ದೂಷಿಸುತ್ತೇವೆ. ಹೀಗೆ ಕರ್ಮಫಲ ನಿರ್ಧಾರಕರೂ ನಾವೇ ಆಗುವ ಮೂಲಕ ಬದುಕಿನ ಉದ್ದಕ್ಕೂ ನಾವು ತಂದುಕೊಳ್ಳುವ ಸಮಸ್ತ ದುಃಖ – ವೇದನೆಗಳಿಗೆ ಕೊನೆಯುಂಟೆ?