- ಇಂದ್ರಿಯಗಳೆಂಬ ಪರಮಶತ್ರು
ಯುದ್ಧವನ್ನು ರಣರಂಗದಲ್ಲೇ ಎದುರಿಸಿಬೇಕೆನ್ನುವುದು ನಿಜ; ಆದರೆ ಎಷ್ಟೋ ವೇಳೆ ಯುದ್ಧದ ಜಯಾಪಜಯಗಳು ಮನಸ್ಸಿನನಲ್ಲೇ ತೀರ್ಮಾನವಾಗಿರುತ್ತವೆ. ಅದಕ್ಕೆ ಕಾರಣ ಇಷ್ಟೇ; ಮನಸ್ಸು ಮನುಷ್ಯನ ಮಿತ್ರನೂ ಹೌದು, ಶತ್ರುವೂ ಹೌದು. ಮನಸ್ಸು ಸಹಿತವಾಗಿ ಇಂದ್ರಿಯಗಳನ್ನು ಜಯಿಸುವ ಯುದ್ಧವೇ ಮನುಷ್ಯನ ಬದುಕಿನ ಬಲು ದೊಡ್ಡ ಸಮರ. ಒಂದೊಮ್ಮೆ ಇಂದ್ರೀಯಗಳೇ ನಮ್ಮ ವಿರುದ್ಧ ಜಯ ಪಡೆದರೆ? ಪರಿಣಾಮ ಬಹಳ ಘೋರ. ನಾವು ಇಂದ್ರಿಯಗಳ ಸೇವಕರಾಗಿ ಅವು ಹೇಳುವ ದುಷ್ಕøತ್ಯಗಳನ್ನೆಲ್ಲ ಮಾಡಬೇಕಾದ ದುಃಸ್ಥಿತಿಯು ಆಗ ಒದಗುತ್ತದೆ. ವಸ್ತುತಃ ನಾವು ಆಗ ರಕ್ಕಸರೇ ಆಗಿ ಬಿಡುತ್ತೇವೆ. ವಾಸ್ತವವಾಗಿ ಇಂದ್ರಿಯಗಳೆಲ್ಲವೂ ಪ್ರಲೋಭನೆಗೆ ಗುರಿಯಾಗುವ ಸ್ವಭಾವವನ್ನು ಹೊಂದಿವೆ. ಪ್ರಯತ್ನಶೀಲನೂ ಬುದ್ಧಿವಂತನೂ ಆದ ಪುರುಷನ ಮನಸ್ಸನ್ನು ಪೀಡಿಸಿ ಬಲವಂತದಿಂದ ಅಪಹರಿಸುವ ಶಕ್ತಿ ಅವಕ್ಕಿದೆ. ಅದಕ್ಕೆಂದೇ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ; ನೀನು ಮನಸ್ಸನ್ನು ಕೇಂದ್ರೀಕರಿಸಿಕೊಂಡು ನನ್ನನ್ನೇ ಧ್ಯಾನಿಸು. ಆಗ ಮಾತ್ರವೇ ಇಂದ್ರಿಯಗಳ ಮೇಲೆ ನಿನಗೆ ನಿಯಂತ್ರಣ ಪ್ರಾಪ್ತವಾಗುತ್ತದೆ. ಇಲ್ಲದಿದ್ದರೆ ಯಾವ ವಿಷಯವನ್ನು ಕುರಿತು ನೀನು ಸದಾ ಯೋಚಿಸುವೆಯೋ ಅವುಗಳಲ್ಲೇ ನಿನಗೆ ಆಸಕ್ತಿ ಉಂಟಾಗಿ ಆ ಬಗ್ಗೆ ಆಸೆ ಮೂಡುತ್ತದೆ. ಆಸೆಗೆ ಅಡ್ಡಿಯುಂಟಾದಾಗ ಕೋಪ ಉತ್ಪತ್ತಿಯಾಗಿ ಆದರಿಂದ ಅವಿವೇಕ ಉಂಟಾಗಿ ಸ್ಮರಣಶಕ್ತಿ ಕುಂಠಿತವಾಗುತ್ತದೆ. ಪರಿಣಾಮವಾಗಿ ನಿನ್ನಲ್ಲಿನ ಜ್ಞಾನಶಕ್ತಿಯು ನಾಶವಾಗುತ್ತದೆ.