79.ಕರ್ಮಕೌಶಲ
ಕರ್ಮಯೋಗದ ಮಹತ್ವವನ್ನು ಒತ್ತಿ ಹೇಳುವ ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ನಮ್ಮೆಲ್ಲರ ನಿತ್ಯ ಬದುಕನ್ನು ಆನಂದಮಯಗೊಳಿಸುವುದಕ್ಕಾಗಿಯೇ ಇದೆ ಎಂಬ ಮಾತಿನಲ್ಲಿ ಸಂದೇಹವಿಲ್ಲ. ಗೀತೋಪದೇಶದಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವೇ ಹೊರತು ಫಲದಲ್ಲಿ ಎಂದಿಗೂ ಅಲ್ಲ. ಆದ್ದರಿಂದ ನೀನು ಕರ್ಮಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನಾಗಬೇಡ. ಹಾಗೆಂದು ನೀನು ಕರ್ಮ ಮಾಡದೆ ಇರಲು ಕೂಡ ಸಾಧ್ಯವಿಲ್ಲ. ನಿಷ್ಕ್ರಿಯನಾಗಿ ಕಾಲಹರಣ ಮಾಡಲು ನಿನಗೆ ಅದೆಂತು ಸಾಧ್ಯ? ಆದುದರಿಂದ ಫಲಾಫೇಕ್ಷೆ ಹೊಂದಿರುವ ಕಾರಣಕ್ಕೆ ನೀನು ಕರ್ಮ ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ! ಕೃಷ್ಣನ ಈ ಎಚ್ಚರಿಕೆ ಏನೆಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಫಲಾಪೇಕ್ಷೆಯನ್ನು ಹೊಂದಬಾರದು ಎಂದು ಹೇಳಿದಾಕ್ಷಣ ಹಿಂದು ಮುಂದು ಯೋಚಿಸದೆ, ‘ಹಾಗಿದ್ದರೆ ನಾನೆಕೆ ವೃರ್ಥಾ ಕರ್ಮದಲ್ಲಿ ತೊಡಗಬೇಕು? ನನ್ನಷ್ಟಕ್ಕೆ ನಾನು ಹಾಯಾಗಿ (ಸೋಮಾರಿಯಾಗಿ) ಇರಬಹುದಲ್ಲ, ಬದುಕಿನ ಈ ಜಂಟಾಟಗಳೆಲ್ಲ ನನಗೆ ಯಾಕೆ’ ಎಂಬ ನಿರ್ಧಾರಕ್ಕೆ ನಾವು ಬರುವುದು ಮೇಲ್ನೋಟಕ್ಕೆ ಸಹಜವೇ. ಕೃಷ್ಣ ನಮ್ಮ ಮನಸ್ಸಿನ ಸೂಕ್ಷ್ಮವನ್ನು ಚೆನ್ನಾಗಿ ಅರಿತಿರುವುದರಿಂಲೇ ಒಂದೇ ಮಾತಿನಲ್ಲಿ ಎರಡನ್ನೂ ಹೇಳುತ್ತಾನೆ. ಫಲಾಫೇಕ್ಷೆಯನ್ನೂ ಹೊಂದಬೇಡ. ಹಾಗಂತ ನಿಷ್ಕ್ರಿಯನೂ ಆಗಬೇಡ! ಬರೇ ಇಷ್ಟನ್ನು ಹೇಳಿ ಕೃಷ್ಣ ಸುಮ್ಮನಿರುವುದಿಲ್ಲ. ಬರಿದೆ ಕರ್ಮನಿರತನಾದರೆ ಸಾಲದು; ಅದನ್ನು ಚಾತುರ್ಯದಿಂದ ಮಾಡು. ಅದರಿಂದ ಮಾಡಿದ ಕರ್ಮವೂ ಸಾರ್ಥಕ; ನಿನ್ನ ಮನಸ್ಸಿಗೂ ಆನಂದ. ಏಕೆಂದರೆ ಕರ್ಮ ಮಾಡುವುದರಲ್ಲಿ ಯೋಗ (ಯೋಗಃ ಕರ್ಮಸು ಕೌಶಲಂ). ಆದುದರಿಂದ ನಾವು ಸದಾ ಕರ್ಮನಿರತರಾಗಬೇಕು ಎಂಬುದಷ್ಟೇ ಕೃಷ್ಣನ ಅಪೇಕ್ಷೆಯಲ್ಲ; ನಾವು ಮಾಡಬೇಕಾದ ಕರ್ಮಗಳನ್ನು ಚೆನ್ನಾಗಿ ಮನಸ್ಸಿಟ್ಟು ಕೌಶಲಪೂರ್ಣವಾಗಿ ನಿರ್ವಹಿಸಬೇಕು ಎಂಬುದೇ ಆತನ ನಿಜವಾದ ಆಶಯ.