- ಆತ್ಮಜಾಗೃತಿಯೇ ಕರ್ಮ
ಕರ್ಮಕೌಶಲ ಸಾಧಿಸಲು ಪಂಚೇಂದ್ರಿಯಗಳೆಂಬ ಕುದುರೆಗಳ ಮೇಲೆ ಮನಸ್ಸಿನ ನಿಯಂತ್ರಣವನ್ನು ಹೊಂದುವುದು ಅಗತ್ಯ ಎನ್ನಲು ಕೃಷ್ನ ಹೀಗೆ ಹೇಳುತ್ತಾನೆ. ಮನಸ್ಸಿನಲ್ಲಿ ಮೊದಲೇ ಅಡಗಿರುವ ಶಕ್ತಿಯನ್ನು ಹೊರಗೆಡಹುವುದೇ ಕರ್ಮದ ನೈಜ್ಯ ಉದ್ದೇಶ. ಆತ್ಮನನ್ನು ಜಾಗೃತಗೊಳಿಸುವುದೇ ನಿಜವಾದ ಕರ್ಮ! ಎಲ್ಲ ಜ್ಞಾನವೂ ನಮ್ಮೊಳಗೇ ಇದೆ. ಅದನ್ನು ನಾವು ಕಂಡುಕೊಳ್ಳಲು ಯತ್ನಿಸುವುದೇ ನಮ್ಮ ಬದುಕಿನ ನಿಜವಾದ ಕರ್ಮ. ಅದುವೇ ನಿಜವಾದ ತಪಸ್ಸು ಕೂಡ. ಆದರೆ ಇದರಲ್ಲಿ ಯಶಸ್ಸು ಪಡೆಯಬೇಕಿದ್ದರೆ ನಿಸ್ವಾರ್ಥದಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮನಸ್ಸಿನ ಏಕಾಗ್ರತೆಯನ್ನು ಸಾಧಿಸದೆ ನಾವು ಯಾವುದೇ ಕಾರ್ಯವನ್ನು ಕೌಶಲಪೂರ್ಣವಾಗಿ ಮಾಡಲಾರೆವು. ದೇಹಶಕ್ತಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಆದಕ್ಕಿಂತ ಮಹತ್ತರವಾದ ಮನಸ್ಸಿನ ಶಕ್ತಿಯನ್ನು ಹೊರತರುವುದು ಅಗತ್ಯ. ನಮ್ಮ ದೇಹವನ್ನು ನಾವು ರಥಕ್ಕೆ ಹೋಲಿಸುವುದಾದರೆ ನಮ್ಮ ಪಂಚೆಂದ್ರಿಯಗಳು ಆ ರಥದ ಕುದುರೆಗಳು. ಇವುಗಳು ಸರಿಯಾದ ದಾರಿಯಲ್ಲಿ ಮತ್ತು ಸರಿಯಾದ ವೇಗದಲ್ಲಿ ಸಾಗಬೇಕಾದರೆ ಅವುಗಳ ಮೇಲೆ ನಿಯಂತ್ರಣವನ್ನು ಹೊಂದುವುದು ಅಗತ್ಯ. ನಿಯಂತ್ರಣವಿಲ್ಲದ ಕುದುರೆಯ ಮೇಲಿನ ಸವಾರಿ ಅತ್ಯಂತ ಅಪಾಯಕಾರಿ. ಅದು ಮಹಾದುರಂತಕ್ಕೂ ಹೇತು. ಈ ದುರಂತವನ್ನು ತಪ್ಪಿಸಬೇಕಾದರೆ ಕರ್ಮಗಳ ಕರ್ತೃವು ನಾನೇ ಎಂಬ ದುರಹಂಕಾರ ನಮ್ಮಲ್ಲಿ ಬೆಳೆಯದಂತೆ ನಾವು ಎಚ್ಚರವಹಿಸಬೇಕು. ಕರ್ಮಫಲದ ಬಗ್ಗೆ ನಿರಾಸಕ್ತರಾಗಬೇಕು. ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಹೆತ್ತವರು ತಮ್ಮ ಮಕ್ಕಳನ್ನು ಸಾಕಿ–ಸಲಹಿ ಬೆಳೆಸುವಾಗ ಅವರಲ್ಲಿರುವ ಭಾವ ಯಾವುದು? ಅದರಲ್ಲಿ ಸ್ವಾರ್ಥದ ಅಂಶ ಇದೆಯೇ? ತಾವು ಪಟ್ಟ ಕಷ್ಟ, ವ್ಯಯಿಸಿದ ಹಣ ಎಲ್ಲವನ್ನೂ ಮಕ್ಕಳು ತಮಗೆ ತಿರುಗಿ ಪಾವತಿಸಬೇಕು ಎಂಬ ಭಾವನೆ ಅವರಲ್ಲಿ ಇರುತ್ತದೆಯೇ? ಇಲ್ಲ. ಕೇವಲ ನಿಷ್ಕಳಂಕ ಪ್ರೀತಿ, ಮಮತೆ ಮತ್ತು ಕರ್ತವ್ಯ ಪ್ರಜ್ಞೆಯಲ್ಲದೇ ಅವರಲ್ಲಿ ಬೇರೇನೂ ಇರದು. ಅಂತಹ ನಿಷ್ಕಳಂಕ ಭಾವನೆಯೇ ಕರ್ಮಯೋಗದ ಮೂಲ ದ್ರವ್ಯ.