Home » ನಿಷ್ಕಳಂಕ ಪ್ರೇಮ
 

ನಿಷ್ಕಳಂಕ ಪ್ರೇಮ

by Kundapur Xpress
Spread the love

84.ನಿಷ್ಕಳಂಕ ಪ್ರೇಮ

ಹೆತ್ತವರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿ ನಿಷ್ಕಳಂಕವಾಗಿರಲು ಕಾರಣ ಮಕ್ಕಳ ಲಾಲನೆಪಾಲನೆಯನ್ನು ತಮ್ಮ ಕರ್ತವ್ಯವೆಂದೇ ಬಗೆದು ಅವರು ಅದನ್ನು ನಿರ್ವಹಿಸುವುದರಿಂದ. ಪ್ರೀತಿಯಲ್ಲಿ ಇರುವ ಮಮತೆ ಅನನ್ಯವಾದದ್ದು. ಅದು ಯಥಾರ್ಥವಾದದ್ದು. ಹಾಗಾಗಿ ಎಷ್ಟೇ ಕಷ್ಟಗಳು ಎದುರಾದರೂ ಅವರು ತಮ್ಮ ಕರ್ತವ್ಯದಿಂದ ವಿಮುಖರಾಗುವುದಿಲ್ಲ. ಕರ್ತವ್ಯದಲ್ಲಿ ಮೂಲಭೂತವಾಗಿ ಇರುವುದು ನಿಃಸ್ವಾರ್ಥ ಮತ್ತು ಪ್ರೇಮ ಭಾವನೆ. ಇವೆರಡು ಇಲ್ಲದಿದ್ದರೆ ಕೈಗೊಂಡ ಕರ್ಮವು ಕರ್ತವ್ಯದ ಔನತ್ಯವನ್ನು ಪಡೆಯದು. ಹೆತ್ತವರಿಗೆ ತಮ್ಮ ಮಕ್ಕಳ ಸಂದರ್ಭದಲ್ಲಿ ಕರ್ತವ್ಯವೆನ್ನುವುದು ಹೇಗೋ ಹಾಗೆ ಮಕ್ಕಳಿಗೂ ತಮ್ಮ ಹೆತ್ತವರ ಸಂದರ್ಭದಲ್ಲಿ ಇರಬೇಕಾದದ್ದು ಕೂಡ ಆಗಿದೆ. ಆದರೆ ನಾವಿಂದು ಬಹಳ ಅಪರೂಪಕ್ಕೆ ಅದನ್ನು ಕಾಣುತ್ತೇವೆ. ಹೆತ್ತು ಹೊತ್ತು ಸಾಕಿ ಸಲಹಿ ಬೆಳೆಸಲ್ಪಟ್ಟ ಮಕ್ಕಳು ತಮ್ಮಕರ್ತವ್ಯ ಸರದಿ ಬಂದಾಗ ತಾಯಿತಂದೆಗೆ ಕೊಡುವ ಎದುರುತ್ತರ ಹೀಗಿದೆ: ‘ನಮ್ಮಿಂದ ನೀವು ಏನನ್ನೂ ನಿರೀಕ್ಷಿಸುವ ಅಗತ್ಯವಿಲ್ಲ; ನಮಗಾಗಿ ನೀವು ಏನು ಮಾಡಿರುವಿರೋ ಅದು ನಿಮ್ಮ ಕರ್ತವ್ಯವೇ ಆಗಿತ್ತು. ನಮ್ಮನ್ನು ಹುಟ್ಟಿಸಿರೆಂದು ನಾವು ನಿಮ್ಮನ್ನು ಕೇಳಿಕೊಂಡಿದ್ದೆವೇನು?’. ಇದು ಇಂದಿನ ಮಕ್ಕಳ ಪ್ರವೃತ್ತಿ. ನಾಗರಿಕ ಸಮಾಜದ ರೀತಿನೀತಿ! ನಿಷ್ಕಳಂಕ ಪ್ರೀತಿ ಮತ್ತು ನಿಃಸ್ವಾರ್ಥದಿಂದ ಮಾಡದ ಕರ್ಮಗಳು ನಮ್ಮನ್ನು ಬಂಧನಕ್ಕೆ ಗುರಿಪಡಿಸಿ ನಿರಂತರ ದುಃಖಕ್ಕೆ ಈಡು ಮಾಡುತ್ತವೆ ಎಂಬುದಕ್ಕೆ ತಾಯ್ತಂದೆ –  ಮಕ್ಕಳ ನಡುವೆ ಹದಗೆಡುವ ಸಂಬಂಧಗಳೇ ನಮಗೆ ಜ್ವಲಂತ ಸಾಕ್ಷಿ. ಶ್ರೀ ಶಂಕರಾಚಾರ್ಯರು ಬಗ್ಗೆ ನಮಗೆ ನಿಷ್ಠುರ ಎಚ್ಚರಿಕೆಯನ್ನು ಕೊಡುತ್ತರೆ: ಚಿತ್ರ ಚೋದ್ಯವಿದು ಜದೀ ಬಂಧನ; ಹೆಂಡತಿ, ಮಕ್ಕಳು ನಿನಗಾರು? ಎಂತು ಬಂದೆ, ನೀ ಯಾರವ ಸೋದರ, ನಿಜವನು ಚಿಂತಿಸು, ನೀ ಯಾರು? ಹೆಂಡತಿ, ಮಕ್ಕಳು, ಬಂಧು, ಬಾಂಧವರೆಂಬ ಅತಿಯಾದ ಮೋಹದಲ್ಲಿ ನಿಷ್ಕಳಂಕ ಪ್ರೇಮ ಇರಲು ಸಾಧ್ಯವೇ?

   

Related Articles

error: Content is protected !!