Home » ಆಸ್ತಿಕ – ನಾಸ್ತಿಕ
 

ಆಸ್ತಿಕ – ನಾಸ್ತಿಕ

by Kundapur Xpress
Spread the love
  1. ಆಸ್ತಿಕ – ನಾಸ್ತಿಕ

ಕರ್ಮಯೋಗಿಗಳಾಗಿ ಬದುಕನ್ನು ನಡೆಸಲು ಮುಖ್ಯವಾಗಿ ದೈಹಕಿ ಹಾಗೂ ಮಾನಸಿಕ ಶಿಸ್ತನ್ನು ರೂಢಿಸಿಕೊಳ್ಳುವುದು ಅಗತ್ಯ. ಎಲ್ಲಕ್ಕಿಂತ ಮಿಗಿಲಾಗಿ ನಾವು ಆಸ್ತಕರಾಗುವುದು ಅಗತ್ಯ. ಆಸ್ತಿಕರೆಂದರೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇರುವವರು ಎಂದು ನಾವು ಸಾಮಾನ್ಯವಾಗಿ ತಿಳಿಯುತ್ತೇವೆ. ಆದರೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ದೇವರನ್ನು ನಂಬದವನು ನಾಸ್ತಿಕ ಎಂದರೆ ಹೊಸ ಧರ್ಮವು ‘ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನನ್ನೇ ನಾಸ್ತಿಕ’ ಎಂದು ಹೇಳುತ್ತದೆ. ನಮ್ಮಲ್ಲಿ ನಮಗೆ ನಂಬಿಕೆ ಇರುವುದೆಂದರೆ ನಮ್ಮ ಹೃದಯಕಮಲದಲ್ಲಿ ಆತ್ಮರೂಪಿಯಾಗಿ ದೇವರು ವಿರಾಜಮಾನನಾಗಿದ್ದಾನೆ ಎಂಬ ನಂಬಿಕೆಯನ್ನು ಹೊಂದಿರುವುದೇ ಆಗಿದೆ. ಪ್ರತಿಯೋರ್ವರಲ್ಲೂ, ಸಮಸ್ತ ಜೀವ ಸಂಕುಲದಲ್ಲೂ ಆ ದೇವನೇ ಆತ್ಮರೂಪಿಯಾಗಿ ವಿಜೃಂಭಿಸಿದ್ದಾನೆ ಎಂಬ ನಂಬಿಕೆಯನ್ನು ಹೊಂದಿರುವವರೇ ಆಸ್ತಿಕರು. ಕರ್ಮ ಮಾರ್ಗದಲ್ಲಿ ಸಾಗಲು ನಾವು ಮುಖ್ಯವಾಗಿ ಐದು ಯಮ ಹಾಗೂ ಐದು ನಿಯಮಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಐದು ನಿಯಮಗಳೆಂದರೆ ಶೌಚ, ಸಂತೋಷ, ಆತ್ಮನಿಯಂತ್ರಣ, ಸಹಿಷ್ಣುತೆ, ಸ್ವಾಧ್ಯಾಯ. ಐದು ಯಮಗಳೆಂದರೆ ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ. ಕರ್ಮಫಲಾಪೇಕ್ಷಿಗಳಾಗದೆ, ಕರ್ಮಕ್ಕೆ ಅಥವಾ ಕರ್ಮಫಲಕ್ಕೆ ಕಟ್ಟುಬೀಳದೆ ಅನಾಸ್ತಕ ಕರ್ಮಯೋಗವನ್ನು ಕೈಗೊಳ್ಳಲು ಈ ಯಮ – ನಿಯಮಗಳನ್ನು ಅನುಸರಿಸುವುದು ಅತ್ಯಗತ್ಯ. ಹಾಗೆ ಹೇಳಿದ ಮಾತ್ರಕ್ಕೆ ಯಾವುದೂ ಸುಲಭವೆಂದು ನಾವು ತಿಳಿಯುವಂತಿಲ್ಲ. ಎಲ್ಲವನ್ನೂ ಅಭ್ಯಾಸದಿಂದಲೇ ನಿಧಾನವಾಗಿ ರೂಢಿಸಿಕೊಳ್ಳ ಬೇಕಾಗುತ್ತದೆ. ಪ್ರಯತ್ನದಿಂದ ಬೆನ್ನು ಹತ್ತಿದ ವಿನಾ ಯಾವ ಒಳ್ಳೆಯ ಅಭ್ಯಾಸಗಳೂ ನಮ್ಮ ಕೈವಶವಾಗುವುದಿಲ್ಲ; ಕಾಲಿನಿಂದ ಒದ್ದುದೂಡಿದ ವಿನಾ ಯಾವ ಒಳ್ಳೆಯ ಅಭ್ಯಾಸಗಳೂ ನಮ್ಮಿಂದ ದೂರವಾಗುವುದಿಲ್ಲ!

   

Related Articles

error: Content is protected !!