ಯಥಾರ್ಥ ಚಿಂತನೆ
ಸ್ವಾರ್ಥಪರರಾಗದೆ ಕರ್ಮದಲ್ಲಿ ತೊಡಗುವುದು ಸಾಧ್ಯವಿಲ್ಲ ಎನ್ನುವ ವಾದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಸ್ವಾರ್ಥವೆಂದರೆ ಕರ್ಮ ಫಲಾಪೇಕ್ಷೆ ಎನ್ನಬಹುದಾದರೂ ಅದು ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. ವಾಸ್ತವವಾಗಿ ಅದರಲ್ಲಿ ನಮಗರಿವಿಲ್ಲದೆಯೇ ಮೋಹ, ಲೋಭ, ಮತ್ಸರ, ಅಹಂಕಾರ, ಅಹಂಭಾವ ಇತ್ಯಾದಿಯಾಗಿ ಎಲ್ಲವೂ ಮಿಳಿತವಾಗಿರುತ್ತದೆ. ಯಾವುದೇ ಸತ್ಕರ್ಮ ಪೂರ್ಣವಾಗಿ ಸತ್ಕರ್ಮವಾಗಿರುವುದಿಲ್ಲ, ಹಾಗೆಯೇ ಯಾವುದೇ ದುಷ್ಕರ್ಮ ಪೂರ್ಣವಾಗಿ ದುಷ್ಕಮ್ವಾಗಿರುವುದಿಲ್ಲ. ಒಂದರಲ್ಲಿ ಇನ್ನೊಂದರ ಸ್ವಲ್ಪಾಂಶವಾದರೂ ಅಡಗಿರುತ್ತದೆ. ಅದಕ್ಕೆ ಕಾರಣ ಇಷ್ಟೇ: ಯಾವುದೋ ಒಂದು ಒಳ್ಳೆಯ ಕೆಲಸದಿಂದ ಹಲವರಿಗೆ ಪ್ರಯೋಜನವಾಗುವಾಗ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕೆಲವರಿಗೆ ತೊಂದರೆ, ನಷ್ಟ, ದುಃಖ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಕರ್ಮಫಲದ ಹಿಂದಿರುವ ಈ ತೊಡಕುಗಳನ್ನು ನಾವು ಅರಿತಿರುವ ಅಗತ್ಯ. ಸತ್ಕರ್ಮಗಳ ಫಲ ಪೂರ್ಣವಾಗಿ ಉತ್ತಮವೇ ಆಗಿರಬೇಕೆಂಬ ಊಹೆಯಾಗಲೀ ಅಪೇಕ್ಷೆಯಾಗಲೀ ಸಾಧುವಲ್ಲ. ಕರ್ಮಫಲದ ಅಪೇಕ್ಷಿಗಳಾದ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳು ತರುವ ಸುಖ–ದುಃಖಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳಲೇ ಬೇಕಾಗುತ್ತದೆ. ಆದ್ದರಿಂದಲೇ ಕರ್ಮಬಂಧನಕ್ಕೆ ನಾವು ಗುರಿಯಾದಿರಲು ಮತ್ತು ನಿರಂತರವಾಗಿ ಕರ್ಮದಲ್ಲಿ ನಮ್ಮನ್ನು ತೊಡಗಿಸಿಕೊಂಡಿರಲು ಕೃಷ್ಣ ಸೂಚಿಸುವ ‘ಅನಾಸಕ್ತ ಕರ್ಮಯೋಗ’ ನಿಜಕ್ಕೂ ನಮ್ಮನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ನಿಶ್ಚಿತ ಮಾರ್ಗವಾಗಿದೆ. ಇದನ್ನು ಯಥಾರ್ಥವಾಗಿ ತಿಳಿದಾಗಲೇ ನಿಸ್ವಾರ್ಥದಿಂದ, ದೇವರ ಪ್ರೀತ್ಯರ್ಥವಾಗಿ, ಕರ್ತವ್ಯಪ್ರಜ್ಞೆಯಿಂದ ಕರ್ಮಕ್ಕೆ ತೊಡಗಲು ಸಾಧ್ಯವಾಗುತ್ತದೆ. ಭವ ಬಂಧನದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.