- ಶ್ರೇಷ್ಠತೆಯ ಮಹತ್ವ
ಪರುಷನಲ್ಲಿ ಶ್ರೇಷ್ಠನೆನಿಸಿಕೊಳ್ಳುವವನು ಯಾರು ಎಂಬ ಪ್ರಶ್ನೆ ಸಾಧನಶೀಲರಾಗ ಬಯಸುವವರಿಗೆ ಮುಖ್ಯವಾಗುತ್ತದೆ. ಶ್ರೇಷ್ಠತೆಯನ್ನು ಸಾಧಿಸುವ ಹಂಬಲ ಎಲ್ಲರಲ್ಲೂ ಇರುತ್ತದೆಯೇ ವಿನಾ ಅದನ್ನು ಸಾಧಿಸುವ ಮಾರ್ಗದ ಬಗ್ಗೆ ಅರಿವಿರುವುದಿಲ್ಲ. ಜನಪ್ರಿಯತೆ ಮತ್ತು ಖ್ಯಾತಿಯನ್ನು ಸಾಧಿಸುವ ಏಕೈಕ ಉದ್ದೇಶವನ್ನು ಹೊಂದಿರುವವರಿಗೆ ಅಡ್ಡಮಾರ್ಗಗಳು ತತ್‍ಕ್ಷಣವೇ ಗೋಚರಿಸುತ್ತವೆ. ಇಂಗ್ಲೀಷಿನಲ್ಲಿ ಒಂದು ಮಾತಿದೆ: ಶಾರ್ಟ್‍ಕಟ್ ವಿಲ್ ಕಟ್ ಯೂ ಶಾರ್ಟ್ ಅಂತ. ಯಶಸ್ಸನ್ನು ಸಾಧಿಸಲು ಅಡ್ಡಮಾರ್ಗಗಗಳನ್ನು ಹಿಡಿದರೆ ಅವು ನಮ್ಮನ್ನೇ ಅಡ್ಡ ಮಲಗಿಸುತ್ತವೆ ಎಂಬುದು ಈ ಮಾತಿನ ಇಂಗಿತ! ಸೂಕ್ಷ್ಮವಾಗಿ ನೋಡಿದರೆ ಯಶಸ್ಸು ಮತ್ತು ಶ್ರೇಷ್ಠತೆಯ ಸಾಧಿಸಲು ಇರುವ ಮಾರ್ಗಗಳು ಅತ್ಯಂತ ದುರ್ಗಮ. ಅವುಗಳ ಮೂಲಕ ಸಾಗಿ ಹೋಗುವುದು ಸುಲಭದ ಕೆಲಸವಲ್ಲ. ಅದಕ್ಕೆ ಬೇಕಾಗಿರುವುದು ಶ್ರದ್ಧೆ, ಸಂಕಲ್ಪ ಮತ್ತು ಪರಿಶ್ರಮ. ಈ ಮೂರು ಇದ್ದಲ್ಲಿ ಶ್ರೇಷ್ಠತೆಯನ್ನು ಸಾಧಿಸುವತ್ತ ದೃಢ ಹೆಜ್ಜೆಯನ್ನು ಹಾಕಬಹುದು. ಪ್ರಾಪಂಚಿಕ ಬದುಕಿನಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಅರ್ಹತೆಯನ್ನು ಪಡೆಯುವವನು ಯಾರು ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣ ಕೊಡುವ ಉತ್ತರ ಹೀಗಿದೆ: ಯಾರು ಮನಃಪೂರ್ವಕವಾಗಿ ಇಂದ್ರೀಯಗಳನ್ನು ವಶಪಡಿಸಿಕೊಂಡು ಅನಾಸಕ್ತವಾದ ಕರ್ಮೇಂದ್ರಿಯಗಳಿಂದ ಕರ್ಮಯೋಗವನ್ನು ಆಚರಿಸುತ್ತಾನೋ ಅವನೇ ಶ್ರೇಷ್ಠವೆನಿಸಿಕೊಳ್ಳುತ್ತಾನೆ. ಕೃಷ್ಣನ ಈ ಮಾತಿನಲ್ಲಿ ಶ್ರದ್ಧೆ, ಸಂಕಲ್ಪ ಹಾಗೂ ಪರಿಶ್ರಮದ ಭಾವಗಳೇ ಅಡಗಿರುವುದನ್ನು ನಾವು ಗಮನಿಸಬೇಕು, ಮಾತ್ರವಲ್ಲ ಬದುಕಿನಲ್ಲಿ ಅದನ್ನು ಕಾರ್ಯಗತಮಾಡಬೇಕು. ನಮ್ಮ ಸ್ವಭಾವ, ಶಕ್ತಿ, ಸಾಮಥ್ಯಕ್ಕೆ ಅನುಗುಣವಾದ ಕರ್ಮಗಳನ್ನು ನಿಷ್ಕಾಮ ಭಾವದಿಂದ ಮಾಡಿದಾಗ ಮಾತ್ರವೇ ಅದು ಕರ್ಮಯಜ್ಞವೆಂದೆನಿಸಿಕೊಳ್ಳುತ್ತದೆ.