- ಬದುಕೊಂದು ಯಜ್ಞ
ನಿಜವಾದ ಅರ್ಥದಲ್ಲಿ ಬದುಕನ್ನು ನಾವು ಒಂದು ಯಜ್ಞವೆಂದೇ ತಿಳಿಯಬಹುದು. ಗೀತೆಯಲ್ಲಿ ಕೃಷ್ಣ ಹೇಳಿದ ಕರ್ಮಯೋಗ ನಿಜಸ್ವರೂಪದಲ್ಲಿ ನಮ್ಮನ್ನು ಕರ್ಮವೆಂಬ ಯಜ್ಞಕ್ಕೆ ಪ್ರೇರೇಪಿಸುತ್ತದೆ. ಋಷಿ–ಮುನಿಗಳು ಅಗ್ನಿಕುಂಡವನ್ನು ರಚಿಸಿ ಯಜ್ಞವನ್ನು ಕೈಗೊಂಡು ಕೊನೆಗೆ ಆಹುತಿಯನ್ನು ನೀಡುವ ಮೂಲಕ ಯಾವ ರೀತಿ ಶ್ರದ್ಧಾಭಕ್ತಿಯಿಂದ ವಿಧ್ಯುಕ್ತವಾಗಿ ಯಜ್ಞಯಾಗಾದಿಗಳನ್ನು ನಡೆಸುತ್ತಾರೋ ಅದೇ ರೀತಿ ಕರ್ಮ ಯೋಗದ ಮೂಲಕ ಪ್ರಾಪಂಚಿಕನಾದವನು ಕರ್ಮಯಜ್ಞವನ್ನು ಕೈಗೊಳ್ಳಬಹುದಾಗಿದೆ ಎಂದು ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವುದರ ಮಹತ್ವವನ್ನು ನಾವು ಗಮನಿಸಬೇಕು. ಋಗ್ವೇದದ ಪುರುಷಸೂಕ್ತದಲ್ಲಿ ವಿರಾಟ ಪುರುಷನ ಉಲ್ಲೇಖ ಬರುತ್ತದೆ. ಈ ವಿರಾಟಪುರುಷನು ಕೈಗೊಳ್ಳುವ ಯಜ್ಞದಲ್ಲಿ ಆತ ತನ್ನ ದೇಹದ ಅವಯವಗಳನ್ನೇ ಒಂದೊಂದಾಗಿ ಯಜ್ಞಕುಂಡಕ್ಕೆ ಆಹುತಿ ನೀಡುತ್ತಾನೆ. ಹಾಗೆಯೇ ನಾವು ನಮ್ಮ ಬದುಕಿನಲ್ಲಿ ನಮ್ಮ ಸಂಕಲ್ಪ, ಸಾಮಥ್ರ್ಯ ಹಾಗೂ ಧೀಃ ಶಕ್ತಿಯನ್ನು ಲೋಕೋದ್ಧಾರಕ್ಕಾಗಿ ಅರ್ಪಿಸುವ ಮೂಲಕ ಕರ್ಮಯಜ್ಞವನ್ನು ಕೈಗೊಳ್ಳಬೇಕಾಗಿದೆ. ಕರ್ಮಫಲದ ಅಪೇಕ್ಷೆಯಿಲ್ಲದೆ ನಿಸ್ವಾರ್ಥ ಭಾವವನ್ನು ಹೊಂದಿದಾಗ ಮಾತ್ರ ಈ ಬಗೆಯ ಕರ್ಮ ಯಜ್ಞ ಸಾಧ್ಯವಾಗುತ್ತದೆ. ನಮ್ಮ ನಮ್ಮ ಶಕ್ತಿ, ಸಾಮಥ್ರ್ಯ, ಸ್ವಭಾವ ಹಾಗೂ ಸ್ವಧರ್ಮಕ್ಕೆ ಅನುಗುಣವಾಗಿ ನಾವು ಕರ್ಮ ಯಜ್ಷವನ್ನು ಕೈಗೊಂಡರೆ ಅದುವೇ ಶ್ರೇಷ್ಠವೆನಿಸುವುದು ಎಂದು ಶ್ರೀ ಕೃಷ್ಣ ಹೇಳುತ್ತಾನೆ. ‘ನೀನು ಶಾಸ್ತ್ರವಿಧಿಯಿಂದ ನಿಶ್ಚಯಿಸಲ್ಪಟ್ಟ ಸ್ವಧರ್ಮರೂಪೀ ಕರ್ಮವನ್ನು ಮಾಡು. ಏಕೆಂದರೆ ಕರ್ಮ ಮಾಡದೇ ಇರುವುದಕ್ಕಿಂತಲೂ ಕರ್ಮ ಮಾಡುವುದೇ ಶ್ರೇಷ್ಠ. ಹಾಗೆ ಮಾಡದೇ ಇದ್ದಲ್ಲಿ ನಿನ್ನ ಶರೀರ ನಿರ್ವಹಣೆ ಅರ್ಥಾತ್ ಜೀವನೋಪಾಯ ಕೂಡ ಸಾಧ್ಯವಾಗುವುದಿಲ್ಲ’ ಎಂಬ ಎಚ್ಚರಿಕೆಯನ್ನು ಕೃಷ್ಣ ನೀಡುತ್ತಾನೆ.