- ಆತ್ಮಶಕ್ತಿಯ ಜಾಗೃತಿ
ನಾವು ಯಾವುದೇ ಕರ್ಮ ಮಾಡುವಾಗಲೂ ಅದರ ಹಿಂದಿರುವ ಉದ್ದೇಶ ಏನು, ಸ್ವಾರ್ಥಪರತೆ ಎಷ್ಟು ಎಂಬುದು ಮುಖ್ಯವಾಗುತ್ತದೆ. ಈ ಎರಡೂ ಅಂಶಗಳು ನಮ್ಮನ್ನು ಕರ್ಮಬಂಧಕ್ಕೆ ಗುರಿ ಪಡಿಸುತ್ತವೆ. ಯಾವುದೇ ಕರ್ಮದ ಉದ್ದೇಶ ಕಿರಿದಾದಷ್ಟೂ ಅದು ಹೆಚ್ಚು ಸ್ವಾರ್ಥಪರವಾಗಿಯೇ ಇರುತ್ತದೆ. ಕರ್ಮದ ಉದ್ದೇಶ ನಿಷ್ಕಳಂಕವಾದಷ್ಟೂ ಅದು ಹೆಚ್ಟು ಉದಾತ್ತವೂ ಲೋಕೋದ್ಧಾರಕವೂ ಆಗಿರುತ್ತದೆ. ಫಲದ ಅಪೇಕ್ಷೆ ಕಡಿಮೆಯಾದಷ್ಟೂ ಕರ್ಮಗಳು ತರುವ ಸಂತಸ, ಸಂತೃಪ್ತಿ ಹೆಚ್ಚು. ಹಾಗಾಗಿಯೇ ಕರ್ಮಗಳ ಜತೆಗೇ ಬರುವ ದುಃಖದ ಪ್ರಮಾಣವೂ ಇಲ್ಲಿ ಕಡಿಮೆ. ನಮ್ಮನ್ನು ನಾವು ಅರಿಯುವ ಮೂಲಕವೇ ಕರ್ಮದೊಂದಿಗಿನ ನಮ್ಮ ಬಂಧನವನ್ನು ನಾವು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ಅರಿಯುವುದೆಂದರೆ ನಮ್ಮ ಶಕ್ತಿ – ಸಾಮಥ್ರ್ಯಗಳನ್ನೂ ದೌರ್ಬಲ್ಯಗಳನ್ನೂ ನಾವು ಅರಿಯುವುದೆಂದೇ ಅರ್ಥ. ಸೀತಾನ್ವೇಷಣೆಗಾಗಿ ಹೊರಟ ವಾನರ ಸೇನೆಯಲ್ಲಿದ್ದ ಹನುಮಂತನಿಗೆ ತಾನು ಇತರ ವಾನರರಿಗಿಂತ ಹೆಚ್ಚು ಶಕ್ತಿಶಾಲಿ ಎಂಬ ಭಾವನೆಯೇನೂ ಇರಲಿಲ್ಲ. ಸಮುದ್ರ ಲಂಘನ ಮಾಡುವ ಶಕ್ತಿ ತನ್ನಲ್ಲಿ ಇದೆ ಎಂಬ ಬಗ್ಗೆ ಕಿಂಚಿತ್ ಅರಿವು ಕೂಡ ಇರಲಿಲ್ಲ. ಆತನಲ್ಲಿ ಅಂತಹ ಶಕ್ತಿ ಇದೆ ಎಂದು ಶ್ರೀರಾಮನು ಹೇಳಿ ಆಶೀರ್ವದಿಸಿದ ಬಳಿಕವೇ ಶ್ರೀರಾಮನಾಮವನ್ನು ಜಪಿಸುತ್ತಾ ಆತ ಸಮುದ್ರ ಲಂಘನಗೈಯುತ್ತಾನೆ! ಇದನ್ನೇ ಹನುಮದ್ವಿಕಾಸ ಎಂದು ವರ್ಣಿಸುತ್ತಾರೆ. ನಾವೆಲ್ಲರೂ ನಿಜವಾದ ಅರ್ಥದಲ್ಲಿ ಹನುಮಂತರೇ ಆಗಿದ್ದೇವೆ. ನಮ್ಮೊಳಗಿನ ಶಕ್ತಿ ಸಾಮಥ್ರ್ಯವನ್ನು ಅರಿಯದೇ ಬದುಕೆಂಬ ಮಹಾಸಾಗರವನ್ನು ನಾವು ಜಿಗಿಯಲಾರೆವು. ನಿಷ್ಕಾಮಕರ್ಮದ ಸಾಫಲ್ಯಕ್ಕೆ ಆತ್ಮಶಕ್ತಿಯನ್ನು ಜಾಗೃತಗೊಳಿಸುವುದೊಂದೇ ಉಪಾಯ ಎನ್ನುವುದಕ್ಕೆ ಇದೊಂದು ನಿದರ್ಶನ.