-
ಕ್ಷಮಯಾಧರಿತ್ರೀ
ಬದುಕಿನಲ್ಲಿ ಸಂತೋಷದಿಂದ ಇರಬೇಕಾದರೆ ಎರಡು ಮುಖ್ಯ ಸಂಗತಿಗಳನ್ನು ನಾವು ‘ಮರೆಯಲು’ ಕಲಿಯಬೇಕು. ಒಂದು ಇತರರು ನಮಗೆ ಮಾಡಿರುವ ಎಲ್ಲ ಕೆಟ್ಟ ಕೆಲಸಗಳು; ಮತ್ತೊಂದು ನಾವು ಇತರರಿಗೆ ಮಾಡಿರುವ ಎಲ್ಲ ಒಳ್ಳೆಯ ಕೆಲಸಗಳು! ಇತರರು ನಮಗೆ ಮಾಡಿರುವ ಯಾವತ್ತೂ ಅನ್ಯಾಯಗಳನ್ನು ನಾವು ಮರೆಯಬೇಕು ಎಂದಾದರೆ ನಮ್ಮಲ್ಲಿ ಇರಬೇಕಾದ ಮುಖ್ಯ ಗುಣ ಕ್ಷಮೆ. ಕ್ಷಮಿಸುವ ಗುಣಕ್ಕಿಂತ ಮಿಗಿಲಾದ ದೊಡ್ಡ ಗುಣ ಬೇರೊಂದಿಲ್ಲ. ಶಿಲುಬೆಗೆ ಏರಿಸಲ್ಪಟ್ಟ ಏಸುಕ್ರಿಸ್ತನು ಕೊನೆಗಾಲದಲ್ಲಿ ದೇವರಲ್ಲಿ ಮಾಡಿದ ಪ್ರಾರ್ಥನೆ ಯಾವುದು? ‘ದೇವರೇ, ಅವರನ್ನು ಕ್ಷಮಿಸು, ಅವರು ಏನು ಮಾಡುತ್ತಿರುವರೆಂದು ಅವರಿಗೇ ತಿಳಿದಿಲ್ಲ’. ನಮ್ಮ ಭೂಮಿತಾಯಿಯು ಯಾವ ಗುಣಕ್ಕೆ ಹೆಸರುವಾಸಿ? ಕ್ಷಮೆ. ಕ್ಷಮಯಾಧರಿತ್ರೀ ಎಂಬ ಮಾತನ್ನು ನಾವು ಕೇಳಿಲ್ಲವೇ? ಕ್ಷಮಿಸುವ ಗುಣವೇ ದೊಡ್ಡ ಗುಣ ಎಂದು ಗಾಂಧೀಜಿಯವರು ಬದುಕಿನ ಉದ್ದಕ್ಕೂ ಪ್ರತಿಪಾದಿಸಿದ್ದಾರೆ. ಈ ಕ್ಷಮಿಸುವ ಗುಣ ನಮ್ಮಲ್ಲಿ ಇದ್ದರೆ ಮಾತ್ರವೇ ಇತರರು ನಮಗೆ ಮಾಡಿರುವ ಎಲ್ಲ ಕೆಟ್ಟ ಕೆಲಸಗಳನ್ನು ನಾವು ಮರೆಯಲು ಸಾಧ್ಯವಾಗುವುದು. ಈ ಕ್ಷಮಾಗುಣದಿಂದ ನಮ್ಮಲ್ಲಿ ದ್ವೇಷ, ಪ್ರತಿಕಾರ, ಹಿಂಸೆಯೇ ಮೊದಲಾದ ದುರ್ಗುಣಗಳು ಭುಗಿಲೇಳಲಾರವು. ಮನಸ್ಸು ಉದ್ವೇಗ – ಉದ್ರೇಕ, ವಿಕಾರಕ್ಕೆ ಒಳಗಾಗಲಾರದು. ಪರಿಣಾಮವಾಗಿ ನಮ್ಮಲ್ಲಿ ಮತ್ತು ಇಡಿಯ ಸಮಾಜದಲ್ಲಿ ಶಾಂತಿ – ಸಮಾಧಾನ ನೆಲೆಸುವುದು. ನಮ್ಮೊಳಗಿನ ದುರಹಂಕಾರವನ್ನು ತೊಲಗಿಸುವ ಮೊದಲ ಪ್ರಯತ್ನವಾಗಿ ನಾವು ಮಾಡುವ ಯಾವತ್ತೂ ಒಳ್ಳೆಯ ಕೆಲಸಗಳನ್ನು ಮರೆಯುವುದೇ ಲೇಸು. ಪ್ರತಿಫಲಾಪೇಕ್ಷೆ ಇರುವ ಕರ್ಮಗಳು ನೆಮ್ಮದಿಯನ್ನು ತಾರವು. ಏಕೆಂದರೆ ಅಂತಹ ಕರ್ಮಗಳಿಂದ ಪ್ರಯೋಜನ ಪಡೆಯುವವರೆಲ್ಲ ನಮ್ಮನ್ನು ಸದಾಕಾಲ ಸ್ಮರಿಸಿ ಗೌರವಿಸಿ ಕೊಂಡಾಡಬೇಕೆಂಬ ಅಪೇಕ್ಷೆಯೇ ಗರಿಗೆದರಿ ಇರುತ್ತದೆ. ಅಂತಹ ಅಪೇಕ್ಷೆ ಹುಟ್ಟುವುದೇ ಅಹಂಕಾರ – ಅಸಂಭಾವದ ಫಲವಾಗಿ!