- ಆತ್ಮಶುದ್ಧಿ
ನಿಸ್ವಾರ್ಥದ ಹಾಗೂ ಆನಂದಮಯ ಬದುಕನ್ನು ನಡೆಸಬೇಕೆಂದು ಬಯಸುವ ನಾವು ಒಂದು ವಿಷಯವನ್ನಂತೂ ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅದೆಂದರೆ ನಾವು ಹುಟ್ಟಿ ಬರುವ ಎಷ್ಟೋ ಮೊದಲು ಈ ಪ್ರಪಂಚವಿತ್ತು; ಸೂರ್ಯ – ಚಂದ್ರ, ಗ್ರಹಾದಿಗಳೂ ಇದ್ದವು. ರಾತ್ರಿ – ಬೆಳಕು ಆಗುತ್ತಲೇ ಇದ್ದವು. ನಮ್ಮ ಮರಣಾನಂತರವೂ ಅವೆಲ್ಲವೂ ಇದ್ದೇ ಇರುವುವು. ಈ ಭೂಮಿಯಲ್ಲಿ ಜನಿಸಿ ಬಂದಿರುವ ನಾವು ನಮ್ಮ ಸ್ವಭಾವಸಿದ್ದವಾದ ಕರ್ಮಗಳಲ್ಲಷ್ಟೇ ತೊಡಗಿಕೊಂಡಿದ್ದೇವೆ. ಇಷ್ಟು ತಿಳುವಳಿಕೆಯನ್ನು ರೂಢಿಸಿಕೊಂಡರೆ ಮಾತ್ರವೇ ನಾವು ಎಸಗುವ ಸತ್ಕರ್ಮಗಳಲ್ಲಿ ಒಳ್ಳೆಯದರ ಅಂಶ ಹೆಚ್ಚುವುದು. ಈ ತಿಳವಳಿಕೆಯನ್ನು ರೂಢಿಸಿಕೊಳ್ಳುವ ಪ್ರಕ್ರಿಯೆಯನ್ನೇ ನಾವು ‘ಆತ್ಮಶುದ್ಧಿ’ ಎಂದು ಕರೆಯಬಹುದು. ಫಲಾಪೇಕ್ಷೆ ಇಲ್ಲದೆ ಕರ್ಮ ನಿರತರಾದಾಗ ನಮ್ಮಲ್ಲಿ ಉಂಟಾಗುವ ವಿನಯ ಶೀಲತೆಯ ಭಾವದಿಂದ ಅಹಂಕಾರ – ಅಸಂಭಾವಗಳು ಕ್ರಮೇಣ ಮರೆಯಾಗತೊಡಗುತ್ತವೆ. ‘ನಾನು ಕೈಗೊಳ್ಳುವ ಕರ್ಮದಿಂದಲೇ ಈ ಪ್ರಪಂಚ, ಈ ಜನ ಸಮೂಹ ಉದ್ಧಾರಗೊಳ್ಳುತ್ತಿದೆ’ ಎಂಬ ಅಹಂಭಾವ ಯಾವತ್ತೂ ಶಾಂತಿ, ನೆಮ್ಮದಿಯನ್ನು ತರುವುದಿಲ್ಲ. ಅದು ತರುವುದು ಗರ್ವವನ್ನು ಮಾತ್ರ. ತನ್ನ ಸತ್ಕರ್ಮಗಳ ಫಲದ ಲಾಭವನ್ನು ಜನರು ಉಣ್ಣುತ್ತಿದ್ದಾರೆ ಎಂಬ ಭಾವನೆಯೇ ಇತರರನ್ನು ತುಚ್ಛವಾಗಿ, ತಿರಸ್ಕಾರದಿಂದ ಕಾಣುವ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ. ತಾನು ಕೈಗೊಂಡ ಸತ್ಕರ್ಮಗಳಿಗೆ ಜನರ ಹೊಗಳಿಕೆ, ಪ್ರಶಂಸೆ ಬರದೇ ಹೋದರೆ ಅದರಿಂದ ದುಃಖವೇ ಉಂಟಾಗುತ್ತದೆ. ಈ ಎಲ್ಲ ಬಗೆಯ ಭ್ರಮೆಗಳು ಬಲಿಯಲು ಏನು ಕಾರಣ? ‘ಈ ಸಮಾಜವನ್ನು ಉದ್ಧರಿಸುವುದಕ್ಕಾಗಿಯೇ ನಾನಿರುವುದು; ನನ್ನಿಂದಲೇ ಈ ಸಮಾಜ ಏಳಿಗೆ ಕಾಣಬೇಕಾಗಿದೆ’ ಎಂಬ ಅಹಂಕಾರವನ್ನು ಬೆಳೆಸಿಕೊಂಡದ್ದೇ ಕಾರಣ. ನಿಜಕ್ಕಾದರೆ ನಮಗಿಂತ ಈ ಸಮಾಜ, ಪ್ರಪಂಚ ಎಷ್ಟೋ ದೊಡ್ಡದು. ನಾವು ಅದರ ಸೇವಕರು ಮಾತ್ರ.