Home » ಮಮಕಾರದ ಬಂಧನ
 

ಮಮಕಾರದ ಬಂಧನ

by Kundapur Xpress
Spread the love

ಪ್ರಾಪಂಚಿಕ ಬದುಕಿನಲ್ಲಿ ವ್ಯಸ್ತರಾಗಿರುವ ನಾವು ಸುಲಭವಾಗಿ ಮೋಹಪರವಶರಾಗಲು ‘ನಾನು, ನನ್ನದು’ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುವುದೇ ಕಾರಣವಾಗಿದೆ. ನಾವು ಮೂಲಭೂತವಾಗಿ ನಮ್ಮ ಅಸ್ತಿತ್ವವನ್ನು ನಮ್ಮ ದೇಹದ ಮೂಲಕವೇ ಕಾಣುವುದರಿಂದ ದೇಹ ರೂಪವೇ ನಮ್ಮನ್ನು ಹಾದಿ ತಪ್ಪಿಸುವ ಮೊದಲ ಸಂಗತಿಯಾಗಿದೆ. ಪತ್ನಿ, ಮಕ್ಕಳು, ಬಂಧುಗಳು ಎನ್ನುವ ಮಮಕಾರ ಹುಟ್ಟಲು ಕೂಡ ಇದೇ ಕಾರಣವಾಗಿದೆ. ದೇಹವೇ ನಮಗೆ ಸರ್ವಸ್ವವಾಗಿರುವುದರಿಂದ ನಮ್ಮೆಲ್ಲ ಭಾವನಾತ್ಮಕ ಸಂಬಂಧಗಳಿಗೆ ಇದುವೇ ಅಡಿಗಲ್ಲಾಗಿದೆ. ನಮ್ಮ ಮಕ್ಕಳು ನಮಗೆ ಇತರೆಲ್ಲ ಮಕ್ಕಳಿಗಿಂತ ಮುದ್ದಾಗಿ ಕಾಣಲು ಈ ಮಮಕಾರದ ಬಂಧನವೇ ಕಾರಣ. ಮೊಘಲ್ ಬಾದಶಹ ಅಕ್ಬರನ ಒಂದು ಸಣ್ಣ ನಿದರ್ಶನವನ್ನು ನಾವಿಲ್ಲಿ ಕಾಣಬಹುದು. ಮುದ್ದಾದ ತನ್ನ ಮೊಮ್ಮಗನ ಬಗ್ಗೆ ತುಂಬ ಅಭಿಮಾನ ಹೊಂದಿದ್ದ ಅಕ್ಬರನು ಒಮ್ಮೆ ಬೀರಬಲ್ಲನಲ್ಲಿ ‘ತನ್ನ ಮೊಮ್ಮಗನಿಗಿಂತ ಸುಂದರವಾಗಿರುವ ಬೇರೊಂದು ಮಗು ಈ ಪ್ರಪಂಚದಲ್ಲಿ ಇದ್ದೀತೇ?’ ಎಂದು ಗರ್ವದಿಂದ ಪ್ರಶ್ನಿಸಿದನಂತೆ. ‘ಅದಕ್ಕೇನು, ಹುಡುಕಿ ನೋಡುವೆ’ ಎಂದು ತಣ್ಣಗೆ ನುಡಿದ ಬೀರಬಲ್ಲ ಕೊನೆಗೊಂದು ದಿನ ಒಬ್ಬ ಭಿಕ್ಷಕಿ ತನ್ನ ಕುರೂಪಿ ಮಗುವನ್ನು ಪ್ರೀತಿಯಿಂದ ಮುದ್ದಿಸುತ್ತಾ ‘ನಿನಗಿಂತ ಚಂದ ಈ ಪ್ರಪಂಚದಲ್ಲಿ ಯಾರು ಇಲ್ಲ ಪುಟ್ಟಾ’ ಎಂದು ಹೇಳುತ್ತಿದ್ದುದನ್ನು ಅಕ್ಬರನಿಗೆ ಕಾಣಿಸಿದ. ಒಡನೆಯೇ ಅಕ್ಬರನಿಗೆ ಆ ತನಕವೂ ತನ್ನನ್ನು ಮುತ್ತಿಕೊಂಡಿದ್ದ ಮಮಕಾರದ ತೆರೆ ಸರಿದಂತೆ ಅನುಭವಾಯಿತು. ನಾನು, ನನ್ನದು, ನನ್ನವರು ಎಂಬ ಮಮಕಾರದ ತೆರೆ ಸರಿದ ವಿನಾ ನಾವು ದೇವರಲ್ಲಿ ನಮ್ಮ ಮನಸ್ಸನ್ನು ನೆಡಲಾರೆವು. ಏಕೆಂದರೆ ಮಮಕಾರದ ತೆರೆ ನಮ್ಮ ಮತ್ತು ದೇವರ ನಡುವೆ ಕಬ್ಬಿಣದ ಪರದೆಯಂತೆ ನಿಂತು ಬಿಡುತ್ತದೆ. ಮಮಕಾರದ ದೆಸೆಯಿಂದಾಗಿ ದೇವರೆದುರು ನಾವು ಮಾಡಿಕೊಳ್ಳುವ ನಿವೇದನೆಗಳೆಲ್ಲವೂ ಸ್ವಾರ್ಥ ಪರವಾಗಿರುತ್ತದೆ.

   

Related Articles

error: Content is protected !!