Home » ಎಂಟು ಹೂವುಗಳು
 

ಎಂಟು ಹೂವುಗಳು

by Kundapur Xpress
Spread the love
  1. ಎಂಟು ಹೂವುಗಳು

ದೇವರನ್ನು ಪೂಜಿಸಲು ನಾವು ದೀಪ, ಧೂಪ, ಪುಷ್ಪಗಳನ್ನು ಬಳಸುತ್ತೇವೆ. ಹೂವಿಲ್ಲದೆ ದೇವತಾರಾಧನೆ ಆಗದು. ತೋಟದಲ್ಲಿ ಬೆಳೆದ ಗಿಡಗಳಲ್ಲಿ ಆಗ ತಾನೇ ಅರಳಿದ ಹೂವುಗಳನ್ನು ಕಿತ್ತು ತಂದು ದೇವರನ್ನು ಅಲಂಕರಿಸಿ ಪೂಜಿಸುವುದರಲ್ಲಿ ಎಲ್ಲರಿಗೂ ವಿಶೇಷ ಆಸಕ್ತಿ. ದೇವತಾರಾಧನೆಯಲ್ಲಿ ಅದು ಸಹಜವೇ. ದೇವರನ್ನು ಎಂಟು ವಿಧದ ಪುಷ್ಪಗಳಿಂದ ಪೂಜಿಸಬೇಕು ಎಂಬ ಉಲ್ಲೇಖವಿದೆ. ನಾವು ಎಂಟೇಕೆ, ಹತ್ತಾರು ಬಗೆಯ ಹೂವುಗಳನ್ನು ತಂದು ಪೂಜಿಸಿ ಧನ್ಯತೆಯ ಭಾವವನ್ನು ಪಡೆಯುತ್ತೇವೆ. ಆದರೆ ದೇವರನ್ನು ಪೂಜಿಸಲು ಎಂಟು ಬಗೆಯ ಹೂವುಗಳು  ಬೇಕೆಂಬಲ್ಲಿ ಎಂಟರ ಮಹತ್ವವೇನು ಎಂಬುದನ್ನು ನಾವು ವಿವೇಚಿಸಬೇಡವೇ? ಹೀಗೆ ವಿವೇಚನೆಗೆ ತೊಡಗಿದಾಗಲೇ ನಮಗೆ ಎಂಟರ ಹಿಂದಿನ ಸತ್ಯಾಂಶ ಗೋಚರವಾಗುತ್ತದೆ. ಇಷ್ಟಕ್ಕೂ ಆ ಎಂಟು ಬಗೆಯ ಹೂವುಗಳು ನಮ್ಮ ಕೈತೋಟದಲ್ಲಿ ನಾವು ಬೆಳೆಸಿರಬಹುದಾದ ಹತ್ತಾರು ಬಗೆಯ ಹೂವುಗಳ ಪಟ್ಟಿಯಲ್ಲಿ ಬರುವುದಿಲ್ಲ! ಗೀತೋಪದೇಶದಲ್ಲಿ ಕೃಷ್ಣನು ಆ ಎಂಟು ಬಗೆಯ ಹೂವುಗಳು ಯಾವುವು ಎಂಬುದನ್ನು ಅರ್ಜುನನಿಗೆ ಸ್ಪಷ್ಟಪಡಿಸುತ್ತಾನೆ: ಅಹಿಂಸೆಯೆಂಬ ಹೂವು, ಇಂದ್ರಿಯ ನಿಗ್ರಹವೆಂಬ ಹೂವು, ಸಮಸ್ತ ಜೀವಸಂಕುಲದ ಮೇಲೆ ತೋರಬೇಕಾದ ದಯೆಯೆಂಬ ಹೂವು, ಸದಾಕಾಲ ಅನುಸರಿಸಬೇಕಾದ ಸತ್ಯವೆಂಬ ಹೂವು, ನಿತ್ಯವೂ ಸಂಪಾದಿಸಬೇಕಾದ ಜ್ಞಾನವೆಂಬ ಹೂವು, ಸದಾ ಕೃತಕೃತ್ಯತೆಯನ್ನು ಕಾಣಬೇಕಾಗಿರುವ ಸಾಧನೆ ಅಥವಾ ತಪಸ್ಸೆಂಬ ಹೂವು, ಕರ್ತವ್ಯ ಪಾಲನೆಯೆಂಬ ಹೂವು ಹಾಗೂ ಅಂತಿಮವಾಗಿ, ಸಮಸ್ತ ಜೀವ ಸಂಕುಲದಲ್ಲಿ, ಮನುಜರಲ್ಲಿ ಜೀವಾತ್ಮನಾಗಿ ನೆಲೆಸಿರುವ ಪರಮಾತ್ಮನನ್ನು ಕಾಣಲು ಯತ್ನಿಸುವ ‘ಧ್ಯಾನ’ವೆಂಬ ಹೂವು!

   

Related Articles

error: Content is protected !!