Home » ಸಂಪತ್ತಿನ ಮದ
 

ಸಂಪತ್ತಿನ ಮದ

by Kundapur Xpress
Spread the love
  1. ಸಂಪತ್ತಿನ ಮದ

ಸಿರಿ-ಸಂಪತ್ತಿನಿಂದ, ಧನ-ಕನಕಗಳಿಂದ ಈ ಲೌಕಿಕ ಪ್ರಪಂಚದಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯ ಎಂಬ ಭಾವನೆ ಎಲ್ಲರಲ್ಲೂ ಸಹಜವಾಗಿಯೇ ತುಂಬಿಕೊಂಡಿದೆ. ಆದರೆ ಹಾಗೆ ನಾವು ಪಡೆಯಲು ಅಥವಾ ಖರೀದಿಸಲು ಸಾಧ್ಯವಾಗಿರುವುದು ನಾವೇ ತಯಾರಿಸಿರುವ ಸಲಕರಣೆಗಳನ್ನು, ವಸ್ತುಗಳನ್ನು, ಪೀಠೋಪಕರಣಗಳನ್ನು, ಐಶಾರಾಮದ ಸೊತ್ತುಗಳನ್ನು, ಸೌಂದರ್ಯ ಸಾಧನಗಳನ್ನು, ಕಾರು-ಬಂಗ್ಲೆಗಳನ್ನು ಅಥವಾ ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ನಾವು ಯಾವುದನ್ನೆಲ್ಲ ನಿರ್ಮಿಸಿದೆವೋ ಅವೆಲ್ಲವುಗಳನ್ನು! ದೈಹಿಕ ಸುಖ-ಸೌಕರ್ಯಗಳನ್ನು ಹೆಚ್ಚಿಸುವ ವಸ್ತುಗಳನ್ನು ಧನ-ಕನಕಗಳಿಂದ ಖರೀದಿಸಿದ ಮಾತ್ರಕ್ಕೆ ನಮ್ಮ ಸಂಪತ್ತಿನ ಬಲದಿಂದ ಎಲ್ಲವನ್ನೂ ಖರೀದಿಸಬಲ್ಲೆವು ಎಂಬ ಮದವನ್ನೂ ನಾವು ಬೆಳೆಸಿಕೊಳ್ಳುತ್ತೇವೆ. ಆ ಮದದ ಫಲವಾಗಿಯೇ ನಾವು ದೇವರ ಒಲುಮೆಯನ್ನೂ ಪಡೆಯಬಲ್ಲೆವು ಎಂಬ ಭ್ರಮೆಯನ್ನು ಕಟ್ಟಿಕೊಳ್ಳುತ್ತೇವೆ. ಈ ಇಹಲೋಕದಲ್ಲಿ ನಾವು ಐಶ್ವರ್ಯವನ್ನು ಎಷ್ಟೇ ಹೆಚ್ಚಿಸಿಕೊಂಡರೂ ಅದರ ಸಾಸಿವೆಯಷ್ಟು ಪ್ರಮಾಣವನ್ನೂ ನಾವು ಮರಣಾನಂತರ ನಮ್ಮೊಂದಿಗೆ ಕೊಂಡೊಯ್ಯಲಾರೆವು. ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವಿನಿಯೋಗಿಸಬೇಕು. ಮಾತ್ರವಲ್ಲ ಆದರಿಂದ ಸಂತೋಷ, ಶಾಂತಿ, ಸಮಾಧಾನ ಸಿಗಬೇಕಾದರೆ ಆ ವಿನಿಯೋಗವು ಲೋಕಕಲ್ಯಾಣಕ್ಕಾಗಿಯೇ ಆಗಬೇಕು. ಆದರೂ ನಾವು ಇಷ್ಟೊಂದು ಸರಳ ಸತ್ಯವನ್ನು ಅರಿಯಲಾರೆವು. ಹಣದ ಮದವು ನಮ್ಮ ಕಣ್ಣಿಗೆ ಕಟ್ಟಿದ ಕಪ್ಪು ಬಟ್ಟೆಯಂತೆ ನಮಗೆ ಯಥಾರ್ಥ ದರ್ಶನಕ್ಕೆ ಅಡ್ಡಿಯುಂಟುಮಾಡುತ್ತದೆ. ಹೀಗಾಗಿಯೇ ಸಂಪತ್ತಿನಿಂದ ತಾವು ದಿಗ್ಗಜರೆಂದು ಭಾವಿಸುವವರು ಒಳಗೊಳಗೇ ಅಶಾಂತಿ, ಅಸಹನೆ, ಟೊಳ್ಳುತನವನ್ನು ಬದುಕಿನ ಉದ್ದಕ್ಕೂ ಅನುಭವಿಸುತ್ತಿರುತ್ತಾರೆ. ಆದರೂ ತಮ್ಮ ಸಂಪತ್ತಿನ ರತ್ನಗಂಬಳಿಯಿಂದ ತಮ್ಮೊಳಗಿನ ಟೊಳ್ಳುತನವನ್ನು ಮುಚ್ಚಿಹಾಕುವ ವಿಫಲ ಯತ್ನದಲ್ಲಿ ನಿರತರಾಗಿರುತ್ತಾರೆ!

   

Related Articles

error: Content is protected !!