- ದುಃಖರಹಿತ ಪ್ರೀತಿ
ಇಂದ್ರಿಯ ಸುಖವೇ ಪರಮ ಸುಖವಾಗಿ ನಮಗೆ ಕಂಡುಬರಲು ಮುಖ್ಯ ಕಾರಣ ನಮಗೆ ಅದು ನಿಜವೆಂಬಂತೆ ಅನುಭವಕ್ಕೆ ಬರುವುದರಿಂದ, ಐಹಿಕ ಪ್ರಪಂಚದಲ್ಲಿ ಮುಳುಗಿರುವ ನಾವು ಸಹಜವಾಗಿಯೇ ಇಂದ್ರಿಯಾತೀತ ವಸ್ತುಗಳನ್ನು ನೋಡಲಾರೆವು. ಹಾಗಾಗಿ ಇಂದ್ರಿಯಗಳ ಮೂಲಕ ನಾವೇನು ಅನುಭವಿಸುತ್ತೇವೋ ಅದೇ ನಮಗೆ ಪರಮ ಸತ್ಯವಾಗಿ ಕಾಣುತ್ತದೆ. ಆದರೆ ಆಧ್ಯಾತ್ಮಿಕತೆಯ ಬೆಳಕಿನಲ್ಲಿ ನಮ್ಮ ಬೌದ್ಧಿಕ ವಿಕಾಸವು ಇಂದ್ರೀಯ ಕ್ಷಿತಿಜವನ್ನು ದಾಟಿ ಮುಂದಕ್ಕೆ ಹೋಗಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಇಂದ್ರೀಯಾತೀತವಾದ ಯಾವುದಾದರೊಂದು ವಿಷಯವನ್ನು ಸತ್ಯವಾಗಿ ನೋಡಿದರೆ ಆಗ ಅದರಲ್ಲಿ ನಮಗೆ ಪ್ರಬಲವಾದ ಆಸಕ್ತಿಯು ಉಂಟಾಗುತ್ತದೆ. ಆದರೆ ಆಸಕ್ತಿಯನ್ನು ನಾವು ಇಂದ್ರೀಯಾತೀತವಾದ ದೇವರ ಕಡೆಗೆ ತಿರುಗಿಸಬೇಕು. ಇದನ್ನು ಹೇಗೆ ಸಾಧಿಸಬೇಕೆಂದರೆ ಇಂದ್ರಿಯ ಸುಖವು ಪ್ರಾಪ್ತವಾಗುವ ಯಾವೆಲ್ಲ ವಿಷಯಗಳ ಮೇಲೆ ನಾವು ಈ ತನಕವೂ ಅನನ್ಯವಾದ ಪ್ರೀತಿ, ಆಸಕ್ತಿಯನ್ನು ತೋರಿರುವೆವೋ ಅವನ್ನೇ ಈಗ ಪೂರ್ತಿಯಾಗಿ ದೇವರ ಕಡೆಗೆ ತಿರುಗಿಸಬೇಕು. ಹೀಗೆ ನಮ್ಮ ಆಸಕ್ತಿಯನ್ನು ದೇವರ ಕಡೆಗೆ ತಿರುಗಿಸಿದಾಗಲೇ ಅದು ನಿಷ್ಕಳಂಕವಾದ ಭಕ್ತಿಯ ರೂಪವನ್ನು ಪಡೆಯುತ್ತದೆ. ನಿಷ್ಕಳಂಕ ಭಕ್ತಿಯ ರೂಪವನ್ನು ಪಡೆಯುವ ಪ್ರೀತಿ, ಆಸಕ್ತಿಗಳು ನಮಗೆ ತಂದು ಕೊಡುವ ಆನಂದದಲ್ಲಿ ದುಃಖದ ಅಂಶವೇ ಇರುವುದಿಲ್ಲ! ಏಕೆಂದರೆ ಅದರಲ್ಲಿ ನಮಗೆ ಯಾವುದೇ ಪ್ರತಿಫಲ ಅಪೇಕ್ಷೆ ಇರುವುದಿಲ್ಲ. ‘ಐಹಿಕ ಸುಖವು ದುಃಖದ ಕರೀಟವನ್ನು ಧರಿಸಿಕೊಂಡೇ ಮಾನವನೆದುರಿಗೆ ಬಂದು ನಿಲ್ಲುತ್ತದೆ. ಯಾರಿಗೆ ಐಹಿಕ ಸುಖ ಬೇಕೋ ಅವರು ದುಃಖವನ್ನೂ ಸ್ವೀಕರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನು ಸ್ವಾಮಿ ವಿವೇಕಾನಂದರು ಕೊಡುತ್ತಾರೆ.