ಧರ್ಮ ಪರಿಪಾಲನೆಯೇ ನಮ್ಮ ಮೊತ್ತ ಮೊದಲ ಕರ್ತವ್ಯ. ಅದರ ಚೌಕಟ್ಟನೊಳಗೇ ಅರ್ಥ ಮತ್ತು ಕಾಮವನ್ನು ಅನುಭವಿಸಬೇಕು ಎಂದು ಹೇಳುವಾಗ ಸಂಪತ್ತು ಮತ್ತು ಸುಖ ಭೋಗಗಳಿಗೆ ಹೇರಲ್ಪಟ್ಟಿರುವ ಮಿತಿಯನ್ನು ನಾವು ಗಮನಿಸಬೇಕು. ಸಂಪತ್ತಿನ ಗಳಿಕೆ ಸರಿಯಾದ ಮಾರ್ಗದಲ್ಲಿ ಸಾಧ್ಯವಾದಾಗ ಅದು ತರುವ ಸುಖ ಸಂತೋಷಗಳು ನಿಷ್ಕಲ್ಮಶವಾಗಿರುತ್ತವೆ. ಗಳಿಸಿದುದಷ್ಟರಲ್ಲೇ ತೃಪ್ತಿ ಪಡೆಯುವ ಮನೋಭಾವ ನಿಜಕ್ಕೂ ಒಂದು ತಪಸ್ಸು. ಆನಂದಮಯ ಬದುಕಿಗೆ ಗುರಿ ಮಾತ್ರವೇ ಶುದ್ಧವಿರುವುದು ಮುಖ್ಯವಲ್ಲ; ಅದನ್ನು ಸಾಧಿಸುವ ಮಾರ್ಗವೂ ಪವಿತ್ರವಾಗಿರುವುದು ಮುಖ್ಯ. ಹಾಗೆಯೇ ಸಂಪತ್ತು. ಸಂಪತ್ತನ್ನು ನಾವು ಹೇಗೆ ಗಳಿಸಿದೆವು ಎನ್ನುವುದರ ಮೇಲೆಯೂ ಅದು ತರುವ ಸುಖ ಸಂತೋಷದ ಪರಿಶುದ್ಧತೆಯು ತೀರ್ಮಾನವಾಗುತ್ತದೆ. ಕಾಮದ ಮೇಲೆ ಕಡಿವಾಣ ಹಾಕುವ ಶಕ್ತಿ ಇರುವುದು ಸದ್ಧರ್ಮ ಪಾಲನೆಯಿಂದ ಗಳಿಸಿದ ಸಂಪತ್ತಿಗೆ ಮಾತ್ರ. ಸದ್‍ಗೃಹಸ್ಥನಿಗೆ ಬಾಳಿನಲ್ಲಿ ದೇವ ಯಜ್ಞ, ಪಿತೃ ಯಜ್ಞ, ಅತಿಥಿ ಯಜ್ಞ, ಋಷಿ ಯಜ್ಞ (ವೇದಾಧ್ಯಯನ), ಭೂತ ಯಜ್ಞ (ಪಶು ಪಕ್ಷಿ, ಪ್ರಾಣಿ, ಸಸ್ಯಗಳ ಪೋಷಣೆ ಮತ್ತು ದಯೆ) ಎಂಬ ಪಂಚ ಮಹಾಯಜ್ಞಗಳನ್ನು ನಿಭಾಯಿಸುವ ಕರ್ತವ್ಯ ಇದೆಯಷ್ಟೆ? ಈ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವುದರಿಂದಲೇ ಇಂದ್ರಿಯಗಳನ್ನು ನಿಗ್ರಹಿಸುವ ಶಕ್ತಿ ಪ್ರಾಪ್ತವಾಗುತ್ತದೆ. ಕಾಮನೆಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳೂ ಕೈಗೂಡುತ್ತವೆ. ಧರ್ಮದಿಂದ ಅರ್ಥವನ್ನು ಗಳಿಸಿ, ಧರ್ಮ ಮತ್ತು ಅರ್ಥದಿಂದ ಕಾಮವನ್ನು ನಿಯಂತ್ರಿಸುವ ಶಿಸ್ತನ್ನು ಕರಗತಮಾಡಿಕೊಂಡದ್ದೇ ಆದರೆ ಬದುಕು ಸುಂದರವೂ ಸುಖಮಯವೂ ಆಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.