ಬೆಂಗಳೂರು : ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೊಚ್ಚಲ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ರಾಜಧಾನಿಯಲ್ಲಿ ಮಹಾ ದುರಂತವೊಂದು ಘಟಿಸಿದೆ. ಬುಧವಾರ ಮಧ್ಯಾಹ್ನ ನಗರದ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಧಿಡೀರ್ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ
1981ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ವೀನಸ್ ಸರ್ಕಸ್ ದುರಂತದಲ್ಲಿ ಬೆಂಕಿ ಮತ್ತು ಕಾಲ್ತುಳಿತಕ್ಕೆ ಸಿಲುಕಿ 92 ಮಂದಿ ಸಾವಿಗೀಡಾಗಿದ್ದರು. ಆ ಬಳಿಕ ಕರ್ನಾಟಕ ಕಂಡ ಈ ಅತಿ ಭೀಕರ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದು, ವೈದೇಹಿ, ಬೌರಿಂಗ್ ಹಾಗೂ ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಇನ್ನು 42 ಮಂದಿ ಸಣ್ಣ ಪ್ರಮಾಣದ ಗಾಯಗಳಿಗೆ ಒಳಗಾಗಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. 11 ಮಂದಿ ಅಮಾಯಕರ ಸಾವಿನ ಈ ದುರಂತವು ಐಪಿಎಲ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಕರಾಳ ದಿನವಾಗಿ ದಾಖಲಾಗಿದೆ


