ನಾಗಪುರ : ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವ ಆಪದ್ಭಾಂಧವರಿಗೆ 25,000 ರೂ. ಗಳ ಬಹುಮಾನ ನೀಡಲಾಗುವುದು. ಪ್ರಸ್ತುತ ಇರುವ ಬಹುಮಾನಕ್ಕಿಂತ ಇದು ಐದು ಪಟ್ಟು ಹೆಚ್ಚಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಇದು ಪ್ರೇರಣೆ ನೀಡಲಿದೆ. ಘಟನೆಯ ನಂತರದ ನಿರ್ಣಾಯಕ ಮೊದಲ ಗಂಟೆಯೊಳಗೆ ರಸ್ತೆ ಅಪಘಾತ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವವರಿಗೆ ಪ್ರಸ್ತುತ ನೀಡುತ್ತಿರುವ 5,000 ರೂ.ಗಳ ಬಹುಮಾನ ಸಾಕಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಬಹುಮಾನ ಮೊತ್ತವನ್ನು 25,000 ರೂ. ಗಳಿಗೆ ಏರಿಕೆ ಮಾಡಲಾಗಿದೆ ಎಂದು ಗಡ್ಕರಿ ಹೇಳಿದರು.
ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಾಯಗೊಂಡವರಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡವರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಮೊದಲ ಏಳು ದಿನಗಳವರೆಗೆ 1.5 ಲಕ್ಷ ರೂ.ಗಳವರೆಗಿನ ಆಸ್ಪತ್ರೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಗಡ್ಕರಿ ಉಲ್ಲೇಖಿಸಿದ್ದಾರೆ