ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು ಇದೀಗ ಇಸ್ಕಾನ್ನ ಮತ್ತೂ ಮೂವರು ಸನ್ಯಾಸಿಗಳನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇನ್ನೋರ್ವ ಸನ್ಯಾಸಿ. ನಾಪತ್ತೆಯಾಗಿದ್ದು ಅವರ ಕುರಿತು ಕಳವಳ ವ್ಯಕ್ತವಾಗಿದೆ.
ಇತ್ತೀಚೆಗೆ ದೇಶದ್ರೋಹ, ಭಯೋತ್ಪಾದನೆಯ ಸುಳ್ಳು ಆರೋಪ ಹೊರಿಸಿ ಬಂಧಿಸಿದ ಸನ್ಯಾಸಿ ಚಿನ್ಮಯ ಕೃಷ್ಣದಾಸ ಅವರ ಭೇಟಿಗೆ ತೆರಳಿದ್ದ ವೇಳೆ ಆದಿನಾಥ ಪ್ರಭು ರಂಗನಾಥ ದಾಸ್ ಮತ್ತು ಶ್ಯಾಮ್ದಾಸ್ ಪ್ರಭು ಎಂಬುವವರನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತ ಕೃಷ್ಣದಾಸ ಅವರ ಆಪ್ತ ಕಾರ್ಯದರ್ಶಿ ನಾಪತ್ತೆಯಾಗಿದ್ದಾರೆ ಎಂದು ಇಸ್ಕಾನ್ ಕೋಲ್ಕತಾದ ವಕ್ತಾರ ರಾಧಾರಾಮ್ ದಾಸ್ ಹೇಳಿದ್ದಾರೆ. ಜೊತೆಗೆ ಬಂಧಿತರೇನು ಉಗ್ರರೇ ಎಂದು ರಾಧಾರಾಮ್ ಆಕ್ರೋಶವ್ಯಕ್ತಪಡಿಸಿದ್ದಾರೆ ಈ ಮೂವರಿಗೂ ವಾರೆಂಟ್ ಸಹ ನೀಡದೆ ಏಕಾಏಕಿ ಬಂಧಿಸಿ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ.
ಬಂಧನಕ್ಕೆ ತೀವ್ರ ಆಕ್ರೋಶ :
ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಇಸ್ಕಾನ್ ಅರ್ಚಕರನ್ನು ಬಂಧಿಸಿರುವುದಕ್ಕೆ ಭಾರತದಲ್ಲಿನ ಇಸ್ಕಾನ್ ತೀವ್ರವಾಗಿ ಆಕ್ರೋಶ ಹೊರಹಾಕಿದೆ. ಬಾಂಗ್ಲಾ ಸರ್ಕಾರ ಹಿಂದೂಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ರಾಜದಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ನಗರಗಳಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.