ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬೈಠಕ್ ಈ ವರ್ಷ ಬೆಂಗಳೂರಿನಲ್ಲಿ ಮಾ.21ರಿಂದ 23ರವರೆಗೆ ನಡೆಯಲಿದೆ.
ಸಂಘದ ಕಾರ್ಯಚಟುವಟಿಕೆಯಲ್ಲಿ ಈ ಎಬಿಪಿಎಸ್ ಬೈಠಕ್ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಇದನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ಈ ಬಾರಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರ ಆವರಣದಲ್ಲಿ ಈ ಬೈಠಕ್ ಜರುಗಲಿದೆ.

ಮಾರ್ಚ್ 23 ರವರೆಗೆ ಸಭೆ
ಬೈಠಕ್‌ನಲ್ಲಿ ಹಿಂದಿನ ವರ್ಷ 2024-25ರ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿಯನ್ನು ಚರ್ಚಿಸಲಾಗುವುದು. ಅದರ ಕುರಿತು ವಿಮರ್ಶಾತ್ಮಕ ಚರ್ಚೆಯ ಜತೆ ವಿಶೇಷ ಕಾರ್ಯಗಳ ಪ್ರಸ್ತುತಿಯೂ ಆಗಲಿದೆ. ಮುಂದಿನ ವಿಜಯದಶಮಿಗೆ ಸಂಘ ಕಾರ್ಯಕ್ಕೆ ನೂರು ವರ್ಷ ಪೂರ್ಣಗೊಳ್ಳಲಿದೆ. ಇದರ ನಿಮಿತ್ತ 2025ರ ವಿಜಯ ದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘ ಶತಾಭ್ದಿ ವರ್ಷ ಎಂದು ಕರೆಯಲಾಗುತ್ತದೆ.
ಬೈಠಕ್‌ನಲ್ಲಿ ಶತಾಭ್ದಿ ವರ್ಷದ ಕಾರ್ಯವಿಸ್ತಾರದ ಯೋಜನೆಯ ಜತೆ ಮುಂಬರುವ ಶತಾಭ್ದಿ ವರ್ಷದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಹಾಗೂ ಅಭಿಯಾನಗಳ ರೂಪರೇಷೆ ಸಿದ್ಧಪಡಿಸಲಾಗುತ್ತದೆ

