ಶ್ರೀನಗರ : ಕಣಿವೆಯಲ್ಲಿ ಭಾರೀ ಮಳೆಯಿಂದಾಗಿ ಬಾಲ್ತಾಲ್ ಮಾರ್ಗದಲ್ಲಿ ಬಂಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ನಂತರ ಅಮರನಾಥ ಯಾತ್ರೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. ಬುಧವಾರ ಮಾರ್ಗದುದ್ದಕ್ಕೂ ಸಂಭವಿಸಿದ ಭೂಕುಸಿತದಲ್ಲಿ ಮೂವರು ಗಾಯಗೊಂಡಿದ್ದಾರೆ. ಜುಲೈ 3 ರಂದು ಪ್ರಾರಂಭವಾದ ಯಾತ್ರೆಯನ್ನು ಈ ವರ್ಷ ಮೊದಲ ಬಾರಿಗೆ ಸ್ಥಗಿತಗೊಳಿಸಲಾಗಿದೆ. ಬಾಲ್ತಾಲ್ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ಭಯಾನಕ ವಿಡಿಯೋವೊಂದರಲ್ಲಿ ಇಬ್ಬರು ಭಕ್ತರು ಕೆಸರಿನ ಪ್ರವಾಹದಲ್ಲಿ ಕೊಚ್ಚಿಹೋಗಿರುವುದು ಕಂಡುಬಂದಿದೆ. ದಾರಿಯಲ್ಲಿನ ಇತರ ಭಕ್ತರು ಅವರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ
ಭೂಕುಸಿತದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನೇಕ ಜನರು ದಾರಿಯಲ್ಲಿ ಅಳವಡಿಸಲಾಗಿರುವ ಬೇಲಿಗಳನ್ನು ಹಿಡಿದು ಕೊಂಡಿರುವುದು ಕಂಡುಬಂದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ನಿಯೋಜಿಸಿ ಜನರನ್ನು ಸ್ಥಳಾಂತರಿಸಲಾಗಿದೆ
ಈ ವರ್ಷ ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು 3,880 ಮೀಟರ್ ಎತ್ತರದ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

