ವಾಷಿಂಗ್ಟನ್ : ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ ಇನ್ನಷ್ಟು ಜೋರಾಗಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರ, ಶೇ.245ರಷ್ಟು ಪ್ರತಿ ಸುಂಕ ಘೋಷಣೆ ಮಾಡಿದೆ. ಸದ್ಯ ಚೀನಾ ಅಮೆರಿಕದ ವಸ್ತುಗಳಿಗೆ ಶೇ.145ರಷ್ಟು ಸುಂಕ ವಿಧಿಸುತ್ತಿದ್ದರೆ, ಅಮೆರಿಕ ಶೇ.125ರಷ್ಟು ಪ್ರತಿ ಸುಂಕ ವಿಧಿಸುತ್ತಿತ್ತು ಈಗ ಬುಧವಾರ ಅಚ್ಚರಿಯ ನಿರ್ಧಾರದಲ್ಲಿ ಇವನ್ನು ಶೇ.245ಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಚೀನಾದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಈ ಸುಂಕ ಬೀಳಲಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಸೇರಿದಂತೆ ಪ್ರಮುಖ ವಸ್ತುಗಳ ಮೇಲೆ ಪೆಟ್ಟು ಬೀಳಲಿದೆ. ಅಂದರೆ, ಚೀನಾದಿಂದ ಆಮದಾಗುವ ಐಫೋನ್‌ಗೆ 999 ಡಾಲರ್ ಇದ್ದರೆ, ಈ ಪ್ರತಿ ಸುಂಕದ ಕಾರಣದಿಂದಾಗಿ ಇದು 2000 ಡಾಲರ್‌ಗೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ವಿಚಿತ್ರವೆಂದರೆ, ಮಂಗಳವಾರವಷ್ಟೇ ಚೀನಾ ಅಮೆರಿಕದಿಂದ ಬರಬೇಕಾಗಿದ್ದ ಬೋಯಿಂಗ್ ವಿಮಾನಗಳ ಖರೀದಿಯನ್ನು ಸ್ಥಗಿತ ಮಾಡಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಸುಂಕ ನಿರ್ಧಾರ ಘೋಷಿಸಿ, ಚೀನಾಗೆ ಶಾಕ್ ನೀಡಿದ್ದಾರೆ. ಅಲ್ಲದೆ, ಈಗಾಗಲೇ 75ಕ್ಕೂ ಹೆಚ್ಚು ದೇಶಗಳು ಆಮೆರಿಕದ ಜತೆಗೆ ಮಾತುಕತೆಗೆ ಸಿದ್ದವಾಗಿವೆ. ಆದರೆ, ಚೀನಾ ಮಾತ್ರ ಈ ಪ್ರತಿಕಾರದ ಸುಂಕದ ಆಟ ಆಡುತ್ತಿದೆ. ಮೊದಲಿಗೆ ಅವರೇ ಮಾತುಕತೆಗೆ ಬರಲಿ, ಮುಂದೆ ನೋಡೋಣ ಎಂದು ಟ್ರಂಪ್ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಚೀನಾ, ನಮಗೆ ಹೋರಾಟವೂ ಬೇಕಾಗಿಲ್ಲ. ಹಾಗೆಯೇ ನಾವು ಹೋರಾಟಕ್ಕೂ ಹೆದರುವುದಿಲ್ಲ ಎಂದಿದೆ. ಅಮೆರಿಕದ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಮಣಿಯುವುದಿಲ್ಲ ಎಂದಿದೆ.

