ಧುಲೆ : ಕಾಂಗ್ರೆಸಿನ ನಾಲ್ಕನೇ ತಲೆಮಾರು ಬಂದರೂ ಜಮ್ಮು-ಕಾಶ್ಮೀರದಲ್ಲಿ ಮತ್ತೆ 370 ನೇ ವಿಧಿ ಜಾರಿಗೊಳಿಸಲು ಸಾಧ್ಯವಾಗದು ಹಾಗೆಯೇ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತ ಮಾಡಿ ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಮತೀಯ ನೆಲೆಯಲ್ಲಿ ಮೀಸಲಾತಿ ನೀಡಲು ಸಾಧ್ಯವಾಗದು ಎಂಬುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಅವರು ನ.20ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ, ರಾಲಿಯೊಂದರಲ್ಲಿ ಮಾತನಾಡಿದರು. ಸ್ವತಃ ದಿ. ಇಂದಿರಾ ಗಾಂಧಿಯವರೇ ಮರಳಿ ಬಂದರೂ 370ನೇ ವಿಧಿಯನ್ನು ಜಮ್ಮು-ಕಾಶ್ಮೀರದಲ್ಲಿ ಮರು ಜಾರಿಗೊಳಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಮತ-ಧರ್ಮಗಳ ನೆಲೆಯಲ್ಲಿ ಯಾರಿಗೂ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನಕ್ಕೆ ವಿರುದ್ಧವಾಗಿ ಮತೀಯ ನೆಲೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲೂ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ದಿನಗಳ ಹಿಂದೆ ಉಲೇಮಾಗಳು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡುವುದು ಸೇರಿದಂತೆ ಕಾಂಗ್ರೆಸನ್ನು ಬೆಂಬಲಿಸಲು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ ಹಿನ್ನೆಲೆಯಲ್ಲಿ ಶಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ