ನವದೆಹಲಿ : ಕಾಂಗ್ರೆಸ್ ಪಕ್ಷವು ಭಾರತದ ಸಂವಿಧಾನವನ್ನು ಒಂದು ಕುಟುಂಬದ ಖಾಸಗಿ ಆಸ್ತಿ ಎಂದು ಪರಿಗಣಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಲೋಕಸಭೆಯ ಅವಧಿಯನ್ನು ಹೆಚ್ಚಿಸಿಕೊಂಡಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಅಳವಡಿಸಿಕೊಂಡ 75 ವರ್ಷಗಳ ಕುರಿತ ಚರ್ಚೆಗೆ ಉತ್ತರಿಸಿದ ಅವರು, ‘ಸಂವಿಧಾನವು ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸುತ್ತದೆ ರಕ್ತಪಾತವಿಲ್ಲದೆ ಅಧಿಕಾರದ ಹಸ್ತಾಂತರಕ್ಕೆ ಸಹಕಾರಿಯಾಗಿದೆ ಬಿಜೆಪಿ 16 ವರ್ಷದಲ್ಲಿ 22 ಸಾಂವಿಧಾನಿಕ ತಿದ್ದುಪಡಿ ಮಾಡಿತು ಆದರೆ ಕಾಂಗ್ರೆಸ್ 55 ವರ್ಷದಲ್ಲಿ 77 ತಿದ್ದುಪಡಿ ಮಾಡಿತ್ತು ಎಂದರು.
‘ಕಾಂಗ್ರೆಸ್ ಸಂವಿಧಾನದ ಖಾಲಿ ಹಾಳೆಯ ನಕಲಿ ಪ್ರತಿಗಳನ್ನು ತೋರಿಸುತ್ತಿರುವುದು ಜನರಿಗೆ ತಿಳಿದಿದ್ದರಿಂದಲೇ ಅವರು (ಕಾಂಗ್ರೆಸ್) ಸೋತರು’ ಎಂದು ಲೇವಡಿ ಮಾಡಿದರು.
ಕುಟುಂಬ ರಾಜಕೀಯ :
ಈ ವೇಳೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಟೀಕಿಸಿದ ಶಾ, ‘ಆ ಪಕ್ಷದ ವರು ನೆಹರು-ಗಾಂಧಿ ಕುಟುಂಬದ ಸುತ್ತ ಸುತ್ತುವುದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದ ವರ್ಗದ ಜನರಿಗಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ. ಮೋದಿ ಸರ್ಕಾರ ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದು, ದೇಶವನ್ನು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಗೊಳಿಸಿದೆ. ಇಂದು ಎಲ್ಲಾ ಮಕ್ಕಳಿಗೂ ತುರ್ತುಸ್ಥಿತಿಯ ಬಗ್ಗೆ ತಿಳಿಸುವುದು ಅವಶ್ಯಕ. ಆಗ ಯಾರೂ ಅದನ್ನು ಇನ್ನೊಮ್ಮೆ ಜಾರಿ ಮಾಡುವ ಧೈರ್ಯ ತೋರುವುದಿಲ್ಲ’ ಎಂದರು.