ಹೊಸದಿಲ್ಲಿ: ದೇಶದ ಮೂಲೆ ಮೂಲೆಗೂ ಬಿಜೆಪಿ ಸಿದ್ಧಾಂತ ಪಸರಿಸುವಂತೆ ಕರೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇದೇ ಸೆ.1ರಿಂದ ದೇಶಾದ್ಯಂತ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನ ಪದೇ ಪದೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅಲ್ಲದೆ, ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಸಂಬೀತ್ ಪಾತ್ರ, ಈ ಸದಸ್ಯತ್ವ ನೋಂದಣಿ ಮೂಲಕ 10 ಕೋಟಿ ಸದಸ್ಯರನ್ನು ಬಿಜೆಪಿಗೆ ಸೇರಿಸಲು ಗುರಿಹಾಕಿಕೊಳ್ಳಲಾಗಿದೆ. ಈ ಹಿಂದೆ ನಡೆದ ಸದಸ್ಯತ್ವ ನೋಂದಣಿ ವೇಳೆ 18 ಕೋಟಿ ಮಂದಿ ಸೇರ್ಪಡೆಯಾಗಿದ್ದರು ಎಂದರು. ಅಲ್ಲದೆ, ಮುಂದೆ ಎದುರಾಗಲಿರುವ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಈ ಅಭಿಯಾನ ನಡೆಯುವುದಿಲ್ಲ ಎಂದಿದ್ದಾರೆ. ಎಲ್ಲ ಜಾತಿ, ಎಲ್ಲ ಧರ್ಮ, ಎಲ್ಲ ಸಮುದಾಯಗಳನ್ನೂ ಈ ಸದಸ್ಯತ್ವ ನೋಂದಣಿ ಮೂಲಕ ತಲುಪಲಾಗುತ್ತದೆ ಎಂದಿದ್ದಾರೆ.