ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮೂರು ವಾರಗಳ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ
ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್ -4 ಮಿಷನ್ ಇಂದು ಜುಲೈ 15 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3:01 ರ ಸುಮಾರಿಗೆ ಭೂಮಿಗೆ ಬಂದಿಳಿದಿದೆ ಈ ಖುಷಿ ಕ್ಷಣವನ್ನು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದಾರೆ. ಲೈವ್ ವೀಕ್ಷಿಸಲು ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಗೆ ಬಂದಿದ್ದರು. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು ಎಲ್ಲೆಡೆ ಸಂತಸ ಮನೆ ಮಾಡಿದೆ
ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದ ನೀರಿನ ಮೇಲೆ ಇಳಿದಿದೆ. ವಾಪಸಾತಿಯ ಬಳಿಕ ಗಗನಯಾತ್ರಿಗಳ ದೇಹ ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಅವರಿಗಾಗಿ 7 ದಿನ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುವುದು

