ನವದೆಹಲಿ : ಹೊಸವರ್ಷದ ಮೊದಲ ದಿನವಾದ ಬುಧವಾರ ದೇಶವ್ಯಾಪಿ ಪೂಜಾಸ್ಥಳಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡಿದ್ದಾರೆ
ಅದರಲ್ಲೂ ಹಿಂದೂಗಳ ಪ್ರಮುಖ ಕ್ಷೇತ್ರವಾಗಿರುವ ಅಯೋಧ್ಯೆ ಮತ್ತು ಕಾಶಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮ ಮಂದಿರದಲ್ಲಿ 3 ಲಕ್ಷಕ್ಕಿಂತ ಹೆಚ್ಚಿನ ಜನರು ಬಾಲರಾಮನ ದರ್ಶನ ಪಡೆದರೆ, ಇತ್ತ, ಕಾಶಿಯಲ್ಲಿ 8 ಲಕ್ಷಕ್ಕೂ ಅಧಿಕ ಭಕ್ತರು ವಿಶ್ವನಾಥನ ದರ್ಶನ ಪಡೆದರು. ಹನುಮಾನ್ ಗಡಿ ಮಂದಿರದಲ್ಲಿಯೂ ಜನದಟ್ಟಣೆ ಹೆಚ್ಚಿತ್ತು. ಇನ್ನು ಕಾಶಿಯಲ್ಲಿ ಬುಧವಾರ ಮುಂಜಾನೆ 3.00ರಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದುಕೊಂಡರು.
ಉಳಿದಂತೆ ತಿರುಪತಿ, ದೆಹಲಿ, ಪಟನಾ, ಅಮೃತಸರ, ಪುರಿ, ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶದ ವಿವಿಧ ದೇಗುಲಗಳಿಗೂ ಜನರು ಭಾರೀ ಪ್ರಮಾಣದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.