ಹೊಸದಿಲ್ಲಿ : ಶ್ರೀಕೃಷ್ಣ ಭಕ್ತ, ಇಸ್ಕಾನ್ ಮುಖಂಡ ಚಿನ್ಮಯ ಕೃಷ್ಣದಾಸ ಬ್ರಹ್ಮಚಾರಿ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು ಮತ್ತು ಹಿಂದುಗಳ ವಿರುದ್ಧದ ದೌರ್ಜನ್ಯಗಳಿಗೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಕೂಡಲೇ ಶಾಶ್ವತ ಕಡಿವಾಣ ಹಾಕಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಶನಿವಾರ ಆಗ್ರಹಿಸಿದೆ.
ಬಾಂಗ್ಲಾದಲ್ಲಿನ ಹಿಂದುಗಳು ಮತ್ತಿತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಬೇಕು. ಈ ವಿಚಾರದಲ್ಲಿ ಜಾಗತಿಕ ಜನಾಭಿಪ್ರಾಯ ಕ್ರೋಢೀಕರಣ-ಬೆಂಬಲ ಪಡೆಯಲು ಶೀಘ್ರ ಶ್ರಮಿಸಬೇಕು ಎಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆಯೊಂದರಲ್ಲಿ ಕೋರಿದ್ದಾರೆ
ತೀರಾ ಖಂಡನಾರ್ಹ :
ಬಾಂಗ್ಲಾದ ಹಿಂದುಗಳು, ಮಹಿಳೆಯರು ಮತ್ತಿತರ ಅಲ್ಪಸಂಖ್ಯಾತರ ವಿರುದ್ಧ ಇಸ್ಲಾಮಿಕ್ ಮತಾಂಧರ ಅಮಾನುಷ ಹಿಂಸಾಚಾರ, ದಾಳಿ, ಹತ್ಯಾಕಾಂಡ, ಸುಲಿಗೆ, ದೊಂಬಿ ಸಹಿತ ದೌರ್ಜನ್ಯಗಳು `ಮೇರೆ ಮೀರಿರುವುದು ತೀರಾ ಅಕ್ಷಮ್ಯ ಮತ್ತು ಕಳವಳಕಾರಿ. ಆರೆಸ್ಸೆಸ್ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿರುವ ಹೊಸಬಾಳೆ, ಈ ಅನ್ಯಾಯ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಬದಲು ಬಾಂಗ್ಲಾದ ಮಧ್ಯಂತರ ಸರ್ಕಾರ ಮತ್ತಿತರ ಸರ್ಕಾರಿ ಸಂಸ್ಥೆಗಳು ಮೂಕ ಪ್ರೇಕ್ಷಕರಂತಿರುವುದು ತೀರಾ ಅನ್ಯಾಯ ಎಂದು ಟೀಕಿಸಿದ್ದಾರೆ ಬಾಂಗ್ಲಾದಲ್ಲಿ ಹಿಂದುಗಳು ಅಸಹಾಯಕರಾಗಿದ್ದಾರೆ.
ಅಲ್ಲಿನ ಹಿಂದುಗಳು ಆತ್ಮರಕ್ಷಣೆಗಾಗಿ ಪ್ರಜಾತಾಂತ್ರಿಕ ರೀತ್ಯಾ ಎತ್ತಿರುವ ಸ್ವರವನ್ನು ಹಿಂಸಾಚಾರ ಮುಖೇನ ಬಲವಂತವಾಗಿ ದಮನಿಸಲಾಗುತ್ತಿದೆ. ಅಲ್ಲಿ ಹಿಂದುಗಳ ವಿರುದ್ಧ ನವೀನ ವಿಧಾನಗಳ ಮುಖೇನ ಅನ್ಯಾಯ ದೌರ್ಜನ್ಯಗಳು ಮುಂದುವರಿದಿರುವುದು ತೀರಾ ಅನ್ಯಾಯ, ಹಿಂದುಗಳ ಶಾಂತಿಯುತ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಕ್ಕಾಗಿ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣದಾಸ ಬ್ರಹ್ಮಚಾರಿ ಅವರನ್ನು ಬಂಧಿಸಿ ಜೈಲಿಗೆ’ ಕಳುಹಿಸಿದ ಬಾಂಗ್ಲಾ ಸರ್ಕಾರದ ಕ್ರಮ ತೀರಾ ತಪ್ಪು ಇವರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಹಿಂದುಗಳ ವಿರುದ್ಧದ ದೌರ್ಜನ್ಯಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದೆ