ಹೊಸದಿಲ್ಲಿ : ಬಿಟ್ ಕಾಯಿನ್ ಹಗರಣದ ತನಿಖೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಬೆಂಗಳೂರು ಸೇರಿ ದೇಶದಾದ್ಯಂತ 60 ಸ್ಥಳಗಳಲ್ಲಿ ಶೋಧ ನಡೆಸಿದೆ.
6,600 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ, ಎನ್‌ಸಿಆರ್, ಪುಣೆ, ಚಂಡೀಗಢ, ನಾಂದೇಡ್, ಕೊಲ್ಲಾಪುರ ಮತ್ತು ಬೆಂಗಳೂರಿನ ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಅಮಿತ್ ಭಾರದ್ವಾಜ್ (ಈಗ ಮೃತ) ಮತ್ತು ಅವರ ಸಹೋದರ ಅಜಯ್ ಭಾರದ್ವಾಜ್ ಅವರ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಈ ಹಗರಣವನ್ನು ಆನ್ ಲೈನ್ ವೇದಿಕೆಗಳ ಮೂಲಕ ನಡೆಸಲಾಗುತ್ತಿದೆ. ಇದನ್ನು 2015 ರಲ್ಲಿ ವೇರಿಯೇಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಹೂಡಿಕೆದಾರರಿಗೆ 18 ತಿಂಗಳುಗಳಲ್ಲಿ ಬಿಟ್ ಕಾಯಿನ್‌ನಲ್ಲಿ 10% ಮಾಸಿಕ ಆದಾಯದ ಭರವಸೆ ನೀಡಿತ್ತು.
ಆರಂಭದಲ್ಲಿ, ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸುವ ಪಾವತಿಗಳನ್ನು ಬಿಟ್ ಕಾಯಿನ್‌ನಲ್ಲಿ ಮಾಡಲಾಗುತ್ತಿತ್ತು. ಆದರೆ 2017 ರ ಹೊತ್ತಿಗೆ, ಹೊಸ ಹೂಡಿಕೆಗಳ ಕುಸಿತದಿಂದ ಈ ವ್ಯವಹಾರವೂ ಕುಸಿಯಿತು. ನಷ್ಟವನ್ನು ಮರೆಮಾಚಲು, ಈ ಯೋಜನೆ, ಪಾವತಿಯನ್ನು ಕಡಿಮೆ ಮೌಲ್ಯದ ಕ್ರಿಪ್ಲೋ ಕರೆನ್ಸಿಯಾದ ಎಂಸಿಎಪಿಗೆ ಬದಲಾಯಿಸಿತು. ಅದರ ಪ್ರಮಾಣ ಮತ್ತು ಜಾಗತಿಕ ಸಂಪರ್ಕಗಳಿಂದಾಗಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ತನಿಖೆಗೆ ಸಿಬಿಐಗೆ ವರ್ಗಾಯಿಸಿತ್ತು. ತನಿಖಾಧಿಕಾರಿಗಳು, ದುರುಪಯೋಗಪಡಿಸಿಕೊಂಡ ಹಣ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ

