Categories
ರಾಷ್ಟ್ರೀಯ ಸುದ್ದಿ

ಪಾಕ್ ಜೈಲಿನಿಂದ 22 ಭಾರತೀಯರ ಬಿಡುಗಡೆ

ಹೊಸದಿಲ್ಲಿ: ಪಾಕಿಸ್ತಾನದ ಕರಾಚಿ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರು ಮಂಗಳವಾರ ಗುಜರಾತ್‌ನ ಗಿ‌ರ್ ಸೋಮನಾಥಕ್ಕೆ ತಲುಪಿದ್ದಾರೆ. ತಮ್ಮ ದೇಶಕ್ಕೆ ಮರಳಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ನೆರೆಯ ದೇಶದ ಜೈಲುಗಳಲ್ಲಿ ಇನ್ನೂ ಕೊಳೆಯುತ್ತಿರುವ ಇತರ ಹಲವಾರು ಭಾರತೀಯ ಮೀನುಗಾರರ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ಸರ್ಕಾರ ಒತ್ತಾಯಿಸಿದರು.

2021 ಏಪ್ರಿಲ್ ಮತ್ತು ಡಿಸೆಂಬರ್ 2022ರ ನಡುವೆ ಗುಜರಾತ್‌ನ ಅರಬ್ಬಿ ಸಮುದ್ರದ ಕಡಲ ಗಡಿಯ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ 22 ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆಯ ಭದ್ರತಾ ಸಂಸ್ಥೆ ಬಂಧಿಸಿತ್ತು. ಸುಮಾರು 195 ಮೀನುಗಾರರು ಇನ್ನೂ ಪಾಕಿಸ್ತಾನದ ಜೈಲುಗಳಲ್ಲಿ ಇದ್ದಾರೆ ಎಂದು ವೆರಾವಲ್‌ನ ಮೀನುಗಾರಿಕೆ ಸಹಾಯಕ ನಿರ್ದೇಶಕ ವಿ.ಕೆ. ಗೋಹೆಲ್ ತಿಳಿಸಿದ್ದಾರೆ.