ಬೆಂಗಳೂರು : ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಚಟುವಟಿಕೆಗಳಿಂದ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದ್ದು, ಕಡಿವಾಣ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವರೂ ಆಗಿರುವ ಪಕ್ಷದ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ವಿಜಯೇಂದ್ರ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳನ್ನು ಸವಿಸ್ತಾರವಾಗಿ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ.ನಡ್ಡಾರನ್ನೂ ಭೇಟಿಮಾಡಲು ವಿಜಯೇಂದ್ರ ಅವರು ಪ್ರಯತ್ನ ನಡೆಸುವ ನಿರೀಕ್ಷೆಯಿದೆ. ಹೆಚ್ಚ ಕಡಿಮೆ ವಿಜಯೇಂದ್ರ ಅವರು ರಾಜಾ ಧ್ಯಕ್ಷರಾದಾಗಿನಿಂದಲೂ ಅವರ ನಾಯಕತ್ವದ ವಿರುದ್ಧ, ಯಡಿಯೂರಪ್ಪ ವಿರುದ್ಧ ಯತ್ನಾಳ ಬಹಿರಂಗವಾಗಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಯತ್ನಾಳ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಇತರ ಕೆಲ ನಾಯಕರೂ ಕೈಜೋಡಿಸಿದ್ದಾರೆ