ನವದೆಹಲಿ : ಜಮ್ಮು-ಕಾಶ್ಮೀರದ ಪಹಲ್ಲಾಂನಲ್ಲಿ ಇತ್ತೀಚೆಗೆ ದಾಳಿ ಮಾಡಿದ್ದ ಉಗ್ರರು, ದಾಳಿಯ ಸಂದರ್ಭದಲ್ಲಿ ಭಾರತೀಯ ರಕ್ಷಣಾಪಡೆಗಳ ಕಣ್ಣಪ್ಪಿಸಲು ಚೀನಾ ತಂತ್ರಜ್ಞಾನ ಮೊರೆ ಹೋಗಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪಾಕಿಸ್ತಾನದಲ್ಲಿರುವ ತಮ್ಮ ಸೂತ್ರಧಾರರ ಜತೆಗೆ ಸಂವಹನಕ್ಕೆ ಉಗ್ರರು ಚೀನಾ ಆ್ಯಪ್ ಹಾಗೂ ಉಪಕರಣಗಳನ್ನು ಬಳಸಿದ್ದಾರೆಂದು ಎನ್‌ಐಎ ತನಿಖೆ ವೇಳೆಗೆ ಪತ್ತೆಯಾಗಿದೆ. ಅದರಲ್ಲೂ ಗೂಢಚರ್ಯೆ ಆರೋಪಕ್ಕಾಗಿ ಭಾರತದಿಂದ ಭಾಗಶಃ ನಿಷೇಧಕ್ಕೆ ಒಳಗಾಗಿರುವ ಚೀನಾದ ಹುವಾಯ್ ಕಂಪನಿಗಳ ಉತ್ಪನ್ನಗಳನ್ನು ದಾಳಿಯ ಸಂದರ್ಭದಲ್ಲಿ ಬಳಸಲಾಗಿದೆ ಎಂದು ಹೇಳಲಾಗಿದೆ.
ಗಲ್ವಾನ್ ಗಲಾಟೆ ಬಳಿಕ 2020ರಲ್ಲಿ ಚೀನಾದ ಈ ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಆಗಿರುವ ಈ ಆ್ಯಪ್‌ಗಳನ್ನು ಬಳಸಿಕೊಂಡು ಇದೀಗ ಉಗ್ರರು ದಾಳಿ ವೇಳೆ ಸಂವಹನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ದಿನ ಚೀನಾ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದೂ ತನಿಖೆ ವೇಳೆ ಪತ್ತೆಯಾಗಿದೆ. ಚೀನಾವು ಈಗಾಗಲೇ ಪಾಕಿಸ್ತಾನಕ್ಕೆ ತನ್ನ ಬೆಂಬಲ ಘೋಷಿಸಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಷಾಕ್ ದಾರ್ ಅವರಿಗೆ ಕರೆ ಮಾಡಿ ನಿಷ್ಪಕ್ಷಪಾತ ತನಿಖೆಗೂ ಕರೆ ನೀಡಿದ್ದಾರೆ ಇದರ ಬೆನ್ನಲ್ಲೇ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

